ಬ್ಲಾಗರ್ ಹಾಗೂ ವರ್ಡ್ ಪ್ರೆಸ್ ನ ಕನ್ನಡ ಬ್ಲಾಗುಗಳಂತೂ ಕವನ, ಕಥೆ, ಪ್ರಯಾಣ, ರಾಜಕೀಯ, ಸುದ್ದಿ, ಅನುಭವ, ವಿಮರ್ಶೆ, ಗಾದೆ, ವಿಜ್ಞಾನ, ಸಾಹಿತ್ಯ, ಕಲೆ - ಹೀಗೆ ವೈವಿಧ್ಯಗಳಿಂದ ತುಂಬಿಹೋಗಿದೆ. ಆದರೂ...
ಅಂತರಜಾಲದಲ್ಲಿ ಕನ್ನಡ ಉಪಯೋಗಿಸುವುದರ ಬಗ್ಗೆ ಕೂಡ ಎಲ್ಲರಿಗೂ ತಿಳಿದಿಲ್ಲ. ಹಲವರು ತಮ್ಮ ಅನಿಸಿಕೆಗಳನ್ನು ಆಂಗ್ಲ ಅಕ್ಷರಗಳನ್ನು ಬಳಸಿ ಬರೆಯುತ್ತಾರೆ. ಕೆಲವರು ಕನ್ನಡದಲ್ಲಿ ಹೇಗೆ ಬರೆಯುವುದು ಎಂದು ಕೂಡ ಕೇಳಿದ್ದಾರೆ. ನನ್ನ ಹಲವು ಗೆಳೆಯ/ಗೆಳತಿಯರು ನನ್ನ ಜೊತೆ ಚಾಟ್ ಮಾಡುವಾಗ/ಬ್ಲಾಗ್ ಓದುವಾಗ ನೀನು ಕನ್ನಡದಲ್ಲಿ ಹೇಗೆ ಬರೆಯುತ್ತೀಯ ಎಂದು ಕೇಳುತ್ತಿರುತ್ತಾರೆ. ಕೆಲವರು ಕನ್ನಡದಲ್ಲಿ ನಾನು ಏನಾದರೂ ಕಳಿಸಿದಾಗ ಇದೇನೋ ಇದು ಬಾಕ್ಸ್ ಬಾಕ್ಸ್ ಡಿಸ್ಪ್ಲೇ ಆಗ್ತಿದೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಬರಹದಲ್ಲಿ ಬರೆದು ಮತ್ತೆ ಇಲ್ಲಿ ಬಂದು ಕಾಪಿ-ಪೇಸ್ಟ್ ಮಾಡುವುದು ತಲೆನೋವು ಮಾರಾಯ ಎಂದು ಇಂಗ್ಲಿಷ್ ಅಕ್ಷರಗಳಿಗೆ ಮೊರೆಹೋಗುತ್ತಾರೆ. ಅವರಿಗೆಲ್ಲ ಸಹಾಯವಾಗಲಿ ಎಂಬ ಆಶಯದಿಂದ ಈ ಲೇಖನ ಬರೆಯುತ್ತಿದ್ದೇನೆ.
ಈಗ ನೇರವಾಗಿ ವಿಷಯಕ್ಕೆ ಬರೋಣ.
*****
ಅಂತರಜಾಲದಲ್ಲಿ ಕನ್ನಡ ಬಳಸಲು ಏನೇನು ಬೇಕು?
- ಒಂದು ಗಣಕಯಂತ್ರ
- ಅಂತರಜಾಲ ಸಂಪರ್ಕ
ವಿಂಡೋಸ್ ಎಕ್ಸ್.ಪಿ. ಬಳಸುತ್ತಿದ್ದೇನೆ. ಆದರೆ ಬ್ಲಾಗುಗಳಲ್ಲಿ ಒತ್ತಕ್ಷರಗಳಿರುವ ಕನ್ನಡ ಅಕ್ಷರಗಳು ಬಿಡಿಬಿಡಿಯಾಗಿ ಕಂಡು ಓದಲು ಕಷ್ಟವಾಗುತ್ತಿದೆ. ಇದನ್ನು ಸರಿಪಡಿಸುವುದು ಹೇಗೆ?
ಅಂತರಜಾಲದಲ್ಲಿ ಕನ್ನಡ ಹೆಚ್ಚಾಗಿ ಬಳಕೆಯಲ್ಲಿರುವುದು ಯೂನಿಕೋಡ್ ಅಕ್ಷರಗಳು. ಅವು ಸರಿಯಾಗಿ ಮೂಡಿಬರಲು ಅದಕ್ಕೆ ಬೇಕಾದ ತಂತ್ರಾಂಶ ಸಹಕಾರ ಅಗತ್ಯ. ಅದಕ್ಕಾಗಿ ನೀವು ಮಾಡಬೇಕಾದುದು:
- Start -> Control Panel ಗೆ ಹೋಗಿ.
- ನೀವು Category View ನಲ್ಲಿ ಇದ್ದರೆ Date, Time, Language and Regional Options ಅನ್ನು ತೆರೆದುಕೊಳ್ಳಿ. ನೀವು Classic View ನಲ್ಲಿ ಇದ್ದರೆ ಈ ಕ್ರಮದ ಅಗತ್ಯವಿಲ್ಲ.
- Regional and Language settings ಅನ್ನು ತೆರೆಯಿರಿ.
- ಅದರಲ್ಲಿ Languages ಎನ್ನುವ ಟ್ಯಾಬ್ ಇರುತ್ತದೆ. ಅಲ್ಲಿಗೆ ಹೋಗಿ.
- Install files for complex script and right-to-left languages (including Thai) ಎಂದು ಇರುವ ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿಕೊಂಡು Apply ಮಾಡಿ. ಈ ಆಯ್ಕೆಯನ್ನು ಸ್ಥಿರಗೊಳಿಸಲು OK ಒತ್ತಿ. ನಿಮಗೆ ಆಪರೇಟಿಂಗ್ ಸಿಸ್ಟಂನ ಸಿಡಿ ಬೇಕಾಗಬಹುದು.
- ಗಣಕವನ್ನು ರೀಸ್ಟಾರ್ಟ್ ಮಾಡಿ ಕನ್ನಡ ಬ್ಲಾಗುಗಳನ್ನು ಓದಲು ಪ್ರಯತ್ನಿಸಿ.
ನಾನೂ ಕನ್ನಡದಲ್ಲಿ ಬರೆಯಬೇಕು. ಅದು ಹೇಗೆ?
ಕನ್ನಡದಲ್ಲಿ ಬರೆಯಲು ಸಹಾಯಕವಾಗುವ ಅನೇಕ ತಂತ್ರಾಂಶಗಳಿವೆ. ಅವುಗಳಲ್ಲಿ ಜನಪ್ರಿಯವಾಗಿರುವುದು ಬರಹ ತಂತ್ರಾಂಶ. ಇದನ್ನು http://www.baraha.com/baraha.htm ನಿಂದ ಉಚಿತವಾಗಿ ಪಡೆದುಕೊಳ್ಳಬಹುದು. ಆಂಗ್ಲ ಅಕ್ಷರಗಳಲ್ಲಿ ಬರೆದು Ctrl+T ಒತ್ತಿದರೆ ತನ್ನಿಂತಾನೇ ಬರೆದಿರುವ ಲೇಖನ ಲಿಪ್ಯಂತರಗೊಳ್ಳುತ್ತದೆ. ಇದರಲ್ಲಿ ಕನ್ನಡವಲ್ಲದೆ ಇನ್ನೂ ಅನೇಕ ಭಾರತೀಯ ಭಾಷೆಗಳನ್ನು ಬರೆಯಬಹುದು.
ನಾನು ಕನ್ನಡದಲ್ಲಿ ಬರೆದು ಬ್ಲಾಗಿನಲ್ಲಿ ಹಾಕಿದ ಲೇಖನ ಬೇರೆ ಗಣಕಗಳಲ್ಲಿ ಸರಿಯಾಗಿ ಕಾಣುತ್ತಿಲ್ಲ. ಏಕೆ ಹೀಗೆ?
ಬರಹದಲ್ಲಿ ಅದರದ್ದೇ ಆದ ಫಾಂಟ್ ಉಪಯೋಗಿಸಲ್ಪಡುತ್ತದೆ. ಅದನ್ನು ನೇರವಾಗಿ ಅಂತರಜಾಲಕ್ಕೆ ಹಾಕಿದರೆ ಬರಹದ ಫಾಂಟ್ ಇರುವ ಗಣಕದಲ್ಲಿ ಮಾತ್ರ ಓದಲು ಸಾಧ್ಯವಾಗುತ್ತದೆ. ಹಾಗಾಗಿ ಅಂತರಜಾಲದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಯೂನಿಕೋಡ್ ಉಪಯೋಗಿಸಿ ಬರೆದರೆ ಎಲ್ಲ ಕಡೆ ಓದಲು ಸಾಧ್ಯವಾಗುತ್ತದೆ. ಬರಹದಲ್ಲಿ ಕಾಪಿ ಮಾಡುವಾಗ ರೈಟ್ ಕ್ಲಿಕ್ ಮಾಡಿ Copy Special... ಆಯ್ಕೆ ಮಾಡಿಕೊಂಡು ಅದರಲ್ಲಿ Text (UNICODE) ಆಯ್ಕೆ ಮಾಡಿಕೊಂಡು ನಂತರ ಬ್ಲಾಗಿನಲ್ಲಿ ಪೇಸ್ಟ್ ಮಾಡಿದರೆ ಎಲ್ಲ ಗಣಕಗಳಲ್ಲೂ ಓದಬಹುದು.
ನಾನು ಬಳಸುತ್ತಿರುವ ಕಛೇರಿಯ ಗಣಕದಲ್ಲಿ ಬರಹ ಇನ್ಸ್ಟಾಲ್ ಮಾಡಲು ನನಗೆ ಅನುಮತಿಯಿಲ್ಲ. ಏನು ಮಾಡಲಿ?
ಬಳಸಲು ಬರಹಕ್ಕಿಂತ ಸುಲಭವಾಗಿರುವ ಇನ್ನೊಂದು ವಿಧಾನವಿದೆ. ಅದು ಗೂಗಲ್ ಲಿಪ್ಯಂತರಣ ಸೇವೆ (Transliteration Service). ಅದು ಈ ಪುಟದಲ್ಲಿ ಲಭ್ಯ: http://www.google.com/transliterate/indic/Kannada. ಇದರಲ್ಲಿ ನಾವು ಸಾಧಾರಣವಾಗಿ ಬರೆಯುವಂತೆ ಬರೆದರೂ ಕೂಡ ಚಾಣಾಕ್ಷವಾಗಿ ಲಿಪ್ಯಂತರಗೊಳ್ಳುತ್ತದೆ. ಆದರೆ ಇದು ಅಂತರಜಾಲ ಸಂಪರ್ಕವಿದ್ದಾಗ ಮಾತ್ರ ಲಭ್ಯ. ಇದೂ ಕೂಡ ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.
ಚಾಟ್ ಮಾಡುವಾಗ ಬರಹ/ಗೂಗಲ್ ನಲ್ಲಿ ಬರೆದು ಕಾಪಿ ಮಾಡಿ ಮತ್ತೆ ಚಾಟ್ ಮಾಡುವಲ್ಲಿಗೆ ಬಂದು ಪೇಸ್ಟ್ ಮಾಡುವಷ್ಟು ಸಹನೆ ನನಗಿಲ್ಲ. ಇದಕ್ಕೇನಾದರೂ ಸುಲಭ ಉಪಾಯವಿದೆಯೆ?
ನೀವು ಬರಹ ಉಪಯೋಗಿಸುತ್ತಿದ್ದಲ್ಲಿ ಉಪಕರಣ ಪಟ್ಟಿಕೆಯಲ್ಲಿರುವ (toolbar) ನೇರ ಬರಹ (Baraha direct) ಆಯ್ಕೆ ಮಾಡಿಕೊಂಡರೆ ನಿಮಗೆ ಎಲ್ಲಿ ಬೇಕೋ ಅಲ್ಲಿ ನೇರವಾಗಿ ಬರೆಯಬಹುದು. ಬರೆಯುವ ನಡುವೆ ಇಂಗ್ಲಿಷ್ ಬಳಸಬೇಕಾದಲ್ಲಿ F11 ಅಥವಾ F12 ಉಪಯೋಗಿಸಬಹುದು. ನೇರ ಬರಹವನ್ನು ಸ್ಟಾರ್ಟ್ ಮೆನುವಿನಲ್ಲಿ All Programs -> Baraha 7.0 -> Baraha Direct ನಿಂದ ಕೂಡ ತೆರೆದುಕೊಳ್ಳಬಹುದು.
ಬರಹವಿಲ್ಲದಿದ್ದಾಗ ಹೇಗೆ ಕನ್ನಡದಲ್ಲಿ ಸುಲಭವಾಗಿ ಚಾಟ್ ಮಾಡಬಹುದು?
ನೀವು ಬೆಂಕಿನರಿ (ಫೈರ್ಫಾಕ್ಸ್) ಉಪಯೋಗಿಸುತ್ತಿದ್ದಲ್ಲಿ ಈ ವಿಸ್ತರಣೆ (extension) ಹಾಕಿಕೊಳ್ಳಬಹುದು:
https://addons.mozilla.org/en-US/firefox/addon/8960
ಇದನ್ನು ಹಾಕಿಕೊಂಡ ನಂತರ ಯಾವುದೇ ಪುಟದಲ್ಲಿ ಬೇಕಾದರೂ ಗೂಗಲ್ ಲಿಪ್ಯಂತರಣ ಸೇವೆ ಬಳಸಿಕೊಳ್ಳಬಹುದು.
*****
ಈ ಪ್ರಶ್ನೋತ್ತರ ಸರಣಿ ಉಪಯುಕ್ತವೇ? ಇದಕ್ಕೆ ಸೇರಿಸಬಹುದಾದ ಪ್ರಶ್ನೆಗಳಿದ್ದರೆ ತಿಳಿಸಿ.