ನಿಮ್ಮೊಂದಿಗೆ ಹರಟೆ ಹೊಡೆದು ಬಹಳ ದಿನಗಳೇ ಕಳೆದು ಹೋದವು ನೋಡಿ. ಹಾಗೆಂದ ಮಾತ್ರಕ್ಕೆ ನಾನೇನು ಗುಡ್ಡ ಕಡಿಯೋ ಅಂಥ ಘನ ಕಾರ್ಯದಾಗ ಬ್ಯುಸಿ ಇದ್ದೆ ಅಂತ ನೀವೇನಾದ್ರೂ ತಿಳಿದಿದ್ದ್ರೆ, ನೀವು ಭಾರಿ ಗಲತ್ ಫೈಮಿದಾಗದೀರಿ... ಜೋಕೆ!! ನನ್ನ ಪಾಲಿಗೆ ಸಿಕ್ಕಿರೋ ಈ ರಜೆಯ ದಿನಗಳನ್ನು ಅತ್ಯಂತ ನಿರುಪಯುಕ್ತವಾದ ರೀತಿಯಲ್ಲಿ ಕಳೆಯುವ ದುಸ್ಸಾಹಸಕ್ಕಿಳಿದಿದ್ದೇನೆ. ಎಂದಿನಂತೆ ಹೀಗೇ ವಿ.ಕ. ತಿರುವುತ್ತಾ ಇದ್ದಾಗ, ಕಣ್ಣಿಗೆ ಬಿದ್ದಂತಹ ಒಂದು ಲೇಖನವೇ ಈ ನನ್ನ ಹರಟೆಯ ಕಥಾ ವಸ್ತು.
ಮಳೆಗಾಲ ಎಂದ ಮೇಲೆ ಕೇಳಬೇಕೇ, ಸದಾ ಎಡ(ಬಲ)ಬಿಡಂತೆ ಹುಯ್ಯುವ ಮಳೆ. ಈ ಬಾರಿ ವರುಣನ ಆರ್ಭಟ ಸ್ವಲ್ಪ ಜಾಸ್ತಿನೇ ಆಯಿತು ಬಿಡ್ರಿ. ಈ ಸಲದ ಮಳೆ, ಬಟ್ಟಾ ಬಯಲು ಸೀಮೆಯಲ್ಲಿರುವಂತಹ ನಮಗೂ ಸಹ ಮಲೆನಾಡಿನ ಮಳೆಗಾಲದ ರುಚಿ ಹೆಂಗಿರುತ್ತೆ ಅಂತ ತೋರಿಸಿಬಿಡ್ತು! ಮಳೆಗಾಲ ಬಂತೆಂದರೆ ಸಾಕು ಬೆಳಗ್ ಬೆಳಿಗ್ಗೀನೇ ಎಲ್ಲರಿಗೂ ಒಳ್ಳೆ ಸಾಥ್ ನೀಡುವ ಸ್ಥಳ ಅಂದರೆ ಬಚ್ಚಲು ಮನೆ ನೋಡ್ರಿ! ಹೊರಗೆ ಹುಯ್ಯುವ ಜಿಟಿ ಜಿಟಿ ಮಳೆಯಿಂದ ತಪ್ಪಿಸಿಕೊಳ್ಳಕ್ಕೆ ಅಂತಾನೇ ಹಲವರು ಬಚ್ಚಲುಮನೆಯ ಆಶ್ರಯ ಪಡೀತಾರೆ. ಒಮ್ಮೆ ಬಾತ್ ರೂಮ್ ಬೋಳ್ಟ್ ಜಡ್ದು ಇಳಿದು ಬಿಟ್ರೆ ಮುಗೀತು. ಅದೆಷ್ಟು ಬಕೀಟು ನೀರು ಖಾಲಿಯಾಗ್ತಾವೋ ಲೆಕ್ಕಕ್ಕೇ ಸಿಗದು. ಹೊರಗಡೆ ಇರೋರು ಎಷ್ಟೇ ಗಂಟೆ ಬಾರ್ಸಿದ್ರೂ ಕಿವಿಗಳು ಜಾಣ ಕಿವುಡುತನ ಪ್ರದರ್ಶನ ಮಾಡ್ತವೆ!!
ನೀವು ಏನೇ ಹೇಳಿ, ಈಗಿನ ಕಾಲದ ಬಾಯ್ಲರ್, ಗೀಜರ್‍ನಲ್ಲಿ ನೀರ್ ಕಾಯಿಸಿ ಸ್ನಾನ ಮಾಡೋದ್ರಲ್ಲಿ ಮಜಾನೆ ಬರೋಲ್ಲಾ ಕಣ್ರೀ. ನಮ್ಮ ಮನೆಯಲ್ಲಿಯೂ ಸಹ ಇದೆ ಕಾರಣಕ್ಕೆಂದು ಹಂಡೆಯ ಸಹಾಯದಿಂದ ನೀರು ಬಿಸಿ ಮಾಡ್ಕೋತ ಇದ್ವಿ. ಎಲ್ಲವೂ ಪ್ಲಾನ್ ಮಾಡ್ಧಂಗೆ ಆಗಿದ್ದಿದ್ದರೆ ಇವತ್ತು ನಮ್ಮನೆಯಲ್ಲಿದಂತಹ ಹಂಡೆಯನ್ನು ಇತಿಹಾಸದ ಪುಟಗಳಿಗೆ ಸೇರಿಸುವ ಪ್ರಸಂಗವೇ ಬರ್ತಾ ಇರ್ಲಿಲ್ಲಾ ಅನ್ಸುತ್ತೆ! ಕಳೆದ ೧೬ರೂವರೆ ವರ್ಷಗಳಿಂದ ನನಗೆ ಬಾತ್ ರೂಮ್ನಲ್ಲಿ ಸಾಥ್ ನೀಡುತ್ತಾ ಬಂದಿದ್ದ ಆ ಹಂಡೆ ಇನ್ನಿಲ್ಲ!! ಇದೇನಪ್ಪಾ ಇಷ್ಟು ದಿನ ಇಲ್ಲ್ದಿದ್ದು ಇದ್ದಕ್ಕಿದ್ದ ಹಾಗೆ ಹಂಡೆಯನ್ನು ಎತ್ತಂಗಡಿ ಮಡ್ಬಿಟ್ರಲ್ಲಾ ಅಂತ ಕೇಳ್ಬೋದು ನೀವು. ಅದೆನೋ ಹೇಳ್ತಾರಲ್ಲಾ, "ಕುಂಬಾರನಿಗೆ ನೂರು ನಿಮಿಷ ಅಂದ್ರೆ ದೊಣ್ಣೆಗೆ ಮೂರು ನಿಮಿಷ" ಅಂತ, ಹೋದ್ ಭಾನುವಾರ ಆಗಿದ್ದೂ ಅದೇಯ. ಈ ಹಂಡೆಯ 'ಕಾಟ' ತಾಳಲಾರದೆ ಅದನ್ನು 'ಅಮಾನುಷವಾಗಿ' ಒಡೆಸಲಾಯಿತು. ನಿಮಗೆನ್ನಿಸಬಹುದು, ಈ ಹಂಡೆಯಿಂದ ಇವರಿಗೇನು ತೊಂದರೆ ಆಗಿರಬಹುದು ಅಂತ? ಅಲ್ಲೆ ಇರೋದು ಕಣ್ರಿ ಈ 'ಖಳನಾಯಕನ' ಒಳ ಮರ್ಮ.
ಕೆಲದಿನಗಳ ಹಿಂದೆ ನಮ್ಮ ತಂದೆಯ ಸ್ನೇಹಿತರೋಬ್ಬರು ನಮ್ಮ ಮನೆಗೆ ಬಂದಾಗ, ಕಾಲು ತೊಳೆಯಲು ಬಾತ್ ರೂಮಿಗೆ ತೆರಳಿದರು. ಹೊರಬಂದವರೆ ನಮ್ಮನ್ನು ಕೇಳಿದರು, "ನೀವು ಯಾಕೆ ಬಾತ್ ರೂಮಿಗೆ 'ಡಾಂಬರ್' ಕಲರ್ ಹೊಡಿಸಿದ್ದೀರಾ ಅಂತ?" ಕ್ಷಣ ಕಾಲ ನಾವೆಲ್ಲಾ ಒಬ್ಬರ ಮುಖವನ್ನೋಬ್ಬರು ನೋಡಿಕೋಂಡೆವು. ಇದೇನಿವ್ರು ಹೀಗ್ ಕೇಳ್ತಾರಲ್ಲಾ ಅಂತ ಎಲ್ಲರಿಗೂ ಆಶ್ಚರ್ಯ! ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ, ನೀವೇನಾದ್ರು ಕತ್ತಲೆಯಲ್ಲಿ ಒಬ್ಬರೆ ನಮ್ಮ ಮನೆಯ ಬಾತ್ ರೂಮಗೆ ಹೋಗಿದ್ದೆ ಆದರೆ, ಹೆದರಿಕೋಂಡು ಬೆಚ್ಚಿ ಬೀಳೋದಂತು ಗ್ಯಾರಂಟಿ! ಕಳೆದ ೧೬ರೂವರೆ ವರ್ಷಗಳಿಂದ ಹಂಡೆಯ 'ಕೃಪಾ ಕಟಾಕ್ಷ'ದಿಂದ ಬಾತ ರೂಮಿನ ಹಾಲತ್ ಹೇಳತೀರದು. ಬಾತ್ ರೂಮಿನಲ್ಲಿ ಒಲೆ ಉರಿ ಹಚ್ಚಿದೆವೆಂದರೆ ಮುಗೀತು. ಒಳಗೆ ಹೋದವರ ಕಣ್ಣಲ್ಲಿ 'ಆನಂದ ಭಾಷ್ಪ ' ಧಾರಾಕಾರವಾಗಿ ಹರಿದುಬರುತ್ತಿತ್ತು! ಹಂಡೆಯು ಹೊರ ಹಾಕುತಿದ್ದ ಹೊಗೆಯ ಕಾರಣ ಬಾತ್ ರೂಮ್ ಇರುವ ಪ್ರದೇಶ ಜನ ವಸತಿಗೆ ಸೂಕ್ತವಾಗಿರಲ್ಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ!!! ನಾವೆಲ್ಲಾ ಹೇಗೆ ಅದರೊಂದಿಗೆ ಇಷ್ಟೊಂದು ದಿನ ಕಾಲಹಾಕಿದೆವೋ ಪರಮಾತ್ಮನೇ ಬಲ್ಲ! ಕೊನೆಗೂ ಎಲ್ಲರ ಸಂಯಮದ ಕಟ್ಟೆಯೊಡೆಯಿತು. ನಾವೆಲ್ಲ ಸೇರಿ ಈ ಖಳನಾಯಕನಿಗೋಂದು ಗತಿ ಕಾಣಿಸಲೇಬೇಕೆಂದು, ಅದರ ಅಸ್ತಿತ್ವಕ್ಕೆ ಕೊಡಲಿ ಇಡಲು ನಿಶ್ಚಯಿಸಿದೆವು. ಅದರ ಫಲವೆ ಇವತ್ತು ನಮ್ಮ ಮನೆಯ ಬಾತ ರೂಮಿನಲ್ಲಿ ಹೊಸ ನಾಯಖನ ಎಂಟ್ರಿಯಾಗಿದೆ! ಹಂಡೆ ಹೋಯಿತು ಗೀಜರ್ ಬಂತು ಡುಮ್ ಡುಮ್ ಡುಮ್!!
ಆದ್ರು ಕಣ್ರಿ ಹಂಡೆ ಇಲ್ಲ ಅಂದ್ರೆ ಮನೆನಲ್ಲಿ ಯಾರನ್ನೋ ಒಬ್ಬರನ್ನ ಮಿಸ್ ಮಾಡ್ಕೊತಾ ಇದೀನೇನೋ ಅಂತ ಅನಿಸ್ತಾ ಇದೆ. ನಮ್ಮ ತಂದೆಯವರಿಗೆ ಒಂದು ರೀತಿಯ ಅಭ್ಯಾಸವೆ ಆಗಿಹೋಗಿದೆ. ಈಗಲೂ ಸಹ ನಮ್ಮಣ್ಣನ್ನ ಉದ್ದೇಶಿಸಿ ಹೇಳ್ತಾನೇ ಇರ್ತಾರೆ, "ಲೊ ಚಂದ್ರು ಹೋಗೊ ಹೊಟ್ಟು ಹಾಕಿ ಒಲೆ ಉರಿ ಹಾಕು" ಅಂತ. ಆಗ ನಾವೆಲ್ಲಾ ಅಪ್ಪನ್ನ ಗೇಲಿ ಮಾಡ್ತಿವಿ. ಇನ್ನೆಲ್ಲಿಯ ಹೊಟ್ಟು, ಇನ್ನೆಲ್ಲಿಯ ಒಲೆ ಉರಿ ಅಣ್ಣಾ? (ನಮ್ಮ ಕಡೆ ತಂದೆಯವರನ್ನು ಅಣ್ಣಾ ಎಂತಲೇ ಸಂಬೋಧಿಸೋದು) ಹಂಡೆ ಉಡೀಸ್ ಅಯಿತು... ಹ್ಹ ಹ್ಹ ಹ್ಹಾ!!
ಈ ಖಳನಾಯಕನ ಸಾವಿನಿಂದ ಯಾರಿಗೆ ಖುಶಿಯಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಚಂದ್ರು ಮಾತ್ರ ಫುಲ್ ಖುಶ್ ಖುಶ್!! ಅವನಿಗೆ ಕೊನೆಗೂ ಈ ಹೊಟ್ಟು ತುಂಬಿ, ಒಲೆ ಉರಿ ಹಾಕುವ ಉಸಾಬರಿಯಿಂದ ಮುಕ್ತಿ ಸಿಕ್ಕಿದೆ! ಅವನ ಬಾಯಲ್ಲಿ ಒಂದೇ ಹಾಡು, "ಈ ಹಂಡೆಯ ಕಾಟದಿಂದ ಕೊನೆಗೂ ಆದೆನು ನಾನು... ಮುಕ್ತ ಮುಕ್ತ ಮುಕ್ತ!!!"
4 ಕಾಮೆಂಟ್‌ಗಳು:
ಒಳ್ಳೆ ವಿಡಂಬನಾತ್ಮಕವಾಗಿ ಬರ್ದಿದೀಯಲ್ಲೋ..
ಆದ್ರು ನಿನ್ ಧಾರವಾಡ್ ಭಾಷಿ ನಂಗೆ ಛಲೋ ಅನ್‍ಸ್ತಪ್ಪ !!
ಕರೇ ನೋಡು! ಬಯಲು ಸೀಮಿ ಭಾಷಿನೇ ಬಾಳ್ ಚಲೋ ನೋಡ್ರಲ್ಲಾ!!
ಎಲ್ಲಾ ಬರಹಗಳೂ ತುಂಬಾ ಚೆನ್ನಾಗಿವೆ.
ನಿಮ್ಮ Blog ಅನ್ನು ನನ್ನ Blog ಜೊತೆ link ಮಾಡಿಕೊಂಡಿದ್ದೇನೆ. Thanks.
Keep writing :)
ತುಂಬಾ ಚನಾಗಿದೆ ನಿಮ್ಮ ಖಳನಾಯಕನ ಕಥೆ ......
ಕಾಮೆಂಟ್ ಪೋಸ್ಟ್ ಮಾಡಿ