ರಾತ್ರಿಯ ಸಮಯ ಸುಮಾರು ೧೧:೪೫... ಶಿರಾದಿಂದ ಸ್ವಲ್ಪ ದೂರದ ಬಳಿ...
ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ಕಾರ್ ಡ್ರೈವ್ ಮಾಡುತ್ತಿದ್ದ ವಾಗಿ ಹಿಂಬದಿಯ ಸೀಟಿನಲ್ಲಿದ್ದ ಭಟ್ಟನಿಗೆ ಹೇಳಿದ. "ಲೇ ಆ ಅಜ್ಜ ಯಾರೋ ಏನೋ ಒಂದೊ ಗೊತ್ತಿಲ್ಲಾ ಮಗಾ... ಕಾರ್ನ್ಯಾಗ್ ಕುಂದ್ರುಸ್ಕೊಳೊದ್ ಬ್ಯಾಡ್ಲೆ... ಸುಮ್ನೆ ರಿಸ್ಕ್ ಯಾಕೆ?" ಭಟ್ಟನಿಗೆ ಅಜ್ಜನ ಮೇಲೆ ಅದ್ಯಾವಾಗ್ ಕನಿಕರ ಮೂಡಿತೊ ಕಾಣೆ, ಹಿಡಿದ ಪಟ್ಟು ಬಿಡ್ಲೆವಲ್ಲಾ. "ಲೇ ವಾಗಿ ಪಾಪ ಅಜ್ಜ ಒಬ್ನೆ ಇದಾನ್ಲೆ... ರಾತ್ರಿ ಟೈಮ್ ಬೇರೆ... ಎನೋ ಇಲ್ಲೆ ಸ್ವಲ್ಪ ದೂರದ್ ಮಟ ಡ್ರಾಪ್ ಕೇಳ್ತಾಯಿದ್ದಾನೆ.. ಡ್ರಾಪ್ ಮಾಡೋದ್ರಾಗ್ ಏನೂ ಪ್ರಾಬ್ಲಮ್ ಆಗಂಗಿಲ್ಲ... ನಾ ಹೇಳದ್ ಕೇಳು, ಆ ಅಜ್ಜಂಗೆ ಡ್ರಾಪ್ ಕೊಡೋಣ..." ಒಲ್ಲದ ಮನಸ್ಸಿನಿಂದ ವಾಗಿ, ಭಟ್ಟನ ಅಧಿಕ ಪ್ರಸಂಗತನಕ್ಕೆ ಮನಸ್ಸಿನಲ್ಲೇ ಹಿಡಿ ಶಾಪ ಹಾಕಿ, ಕಾರನ್ನು ಹಿಂದಕ್ಕೆ ತಗೊಂಡ...
***
ಆ ಕರಾಳ ರಾತ್ರಿ ಘಟಿಸಿ, ಇವತ್ತಿಗೆ ಸರಿಯಾಗಿ ಒಂದ್ ವರ್ಷ ತುಂಬುತ್ತೆ. ಕೆಳ ದಿನಗಳ ಹಿಂದೆ ಭಟ್ಟ ಸಿಕ್ಕಿದ್ದ. ಆ ಕರಾಳ ರಾತ್ರಿಯ ನೆನಪುಗಳನ್ನು ಭಟ್ಟ ಮೆಲುಕು ಹಾಕುತ್ತಾ ಹೋದಂತೆಲ್ಲಾ, ನಾನೂ ಸಹ ಆ ಕರಾಳ ರಾತ್ರಿಯ ಪ್ರತ್ಯಕ್ಷ ದರ್ಶಿಯಾಗಿದ್ನೇನೋ ಅಂತ ಅನಿಸೋದಕ್ಕೆ ಶುರು ಆಯಿತು. ಕಳೆದ ವರ್ಷ ಸೆಪ್ಟೆಂಬರ್ ೧೩ರಂದು ನನ್ನ ಗೆಳೆಯರಾದಂತಹ ವಾಗೀಶ್ ಅಲಿಯಾಸ್ ವಾಗಿ, ರಾಜೇಶ್ ಅಲಿಯಾಸ ರಾಜು ಯಾವುದೋ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ರು. ಕಾಕತಾಳಿಯವೆನೋ ಎಂಬಂತೆ ಭರತ್ ಅಲಿಯಾಸ್ ಭಟ್ಟನೂ ಅವತ್ತು ಬೆಂಗಳೊರಿನಲ್ಲೆ ಇದ್ದ. ವಾಗಿ ಹಾಗು ರಾಜು ೧೩ರರ ರಾತ್ರಿನೇ ದಾವಣಗೆರೆಗೆ ವಾಪಸ್ ಬರೋದು ಅಂತ ಡಿಸೈಡ್ ಆಗಿತ್ತು. ಎಂದಿನಂತೆ ವಾಗಿ ಭಟ್ಟನಿಗೆ ಫೋನ್ ಮಿಲಾಯಿಸಿದ. ಅವರ ನಡುವೆ ನಡೆದ ಫೋನಾಯಣದ ಫಲಶ್ರುತಿಯೇ, ಮೂವರೂ ಸೇರಿ ವಾಗಿಯ ಮಾರುತಿ ೮೦೦ ಕಾರಿನಲ್ಲಿ ದಾವಣಗೆರೆಗೆ ರಿಟರ್ನ್ ಆಗಿದ್ದು!
ಸಮಯ ಸುಮಾರು ರಾತ್ರಿಯ ೧೦:೩೦... ಮೆಜೆಸ್ಟಿಕ್ ಬಳಿಯ ಹೋಟೆಲಿನಲ್ಲಿ...
ವಾಗಿ ಹಾಗು ರಾಜು ಮೆಜೆಸ್ಟಿಕ್ ಬಳಿಯಿರುವ ಕಾಮತ್ ಹೋಟೆಲಿನಲ್ಲಿ ರಾತ್ರಿಯ ಫುಲ್ ಮೀಲ್ಸ್ ಮುಗಿಸಿ ವಾಗಿಯ ಬಿಳೀ ಮಾರುತಿ ಕಾರಿನಲ್ಲಿ ಕುಳಿತು ಸೀದಾ ಸಿಟಿ ರೈಲ್ವೇ ನಿಲ್ದಾಣದ ಕಡೆ ತೆರಳಿದರು. ರಾಜು ಕಾರಿನಲ್ಲಿದ್ದ ಎಫ್.ಎಂ. ಆನ್ ಮಾಡಲು ವಾಗಿಗೆ ಹೇಳಿದ. ಅದರಲ್ಲಿ ಬರುತ್ತಿದ್ದ ಯಾವುದೋ ಒಂದು ಸಾಂಗ್ ಕೆಳ್ತಾ, ಗಿಜಿ ಗಿಜಿ ಎಂದು ಗುಯ್ಗುಡುವ ಟ್ರಾಫಿಕನ್ನು ದಾಟಿ ಕೊನೆಗೂ ಸಿಟಿ ರೈಲ್ವೆ ನಿಲ್ದಾಣ ತಲುಪಿದರು. ಕೊಟ್ಟ ಮಾತಿಗೆ ತಪ್ಪದವನಂತೆ ಅಲ್ಲಿಯೇ ಎಂಟ್ರೆನ್ಸ್ ಬಳಿ ಭಟ್ಟನು ಇವರಿಗಾಗಿ ಕಾಯುತ್ತಿದ್ದದ್ದು ಕಂಡುಬಂತು. ಭಟ್ಟನನ್ನು ಹಿಂಬದಿಯ ಸೀಟ್ನಲ್ಲಿ ಕುಂದ್ರುಸ್ಕಂಡ ಇವರು, ಸೀದಾ ದಾವಣಗೆರೆಯ ಕಡೆಗೆ ತಮ್ಮ ಪಯಣ ಬೆಳೆಸಿದರು. ಹೈವೇ ರೀಚ್ ಆಗೋ ಹೋತ್ತಿಗೆ, ಸ್ವಲ್ಪ ಹೆವೀಯಾಗೇ ಊಟ ಮಾಡಿದ್ದ ರಾಜೂಗೆ ನಿದ್ರಾದೇವಿಯು, "ಬಾ ನನ್ನನ್ನು ಆಲಂಗಿಸೂ..." ಎಂದು ಕರೆಯುತ್ತಿದ್ದಳು. ಕಾರಿನಲ್ಲಿ ಆಗಿಂದಲೂ ಒಂದೇ ಸಮನೆ ಹೊಡ್ಕೋತಿದ್ದ ಎಫ್.ಎಂ ಅನ್ನು ಬಂದ್ ಮಾಡಲು ವಾಗಿಗೆ ಹೇಳಿ, ಅವನ ಉತ್ತರಕ್ಕೂ ಕಾಯದೆ ನಿದ್ರೆಗೆ ಜಾರಿದ, ಆ ಭೂಪ! ಭಟ್ಟನಿಗೆ ಅದೇಕೋ ಏನೋ ಅವತ್ತು ಎಷ್ಟೇ ಟ್ರೈ ಮಾಡಿದ್ರೂ ನಿದ್ದೇನೇ ಬರ್ತಾ ಇಲ್ಲಾ. ಅವನು ಎಷ್ಟೇ ಮಗ್ಗಲು ಬದಲಾಯಿಸಿದರೂ ನಿದ್ರಾ ದೇವಿ ತನ್ನ ಕೃಪೆ ತೋರಲೇ ಇಲ್ಲ! ಇವನು ಪಡುತಿದ್ದ ಎಲ್ಲಾ ಕಷ್ಟಗಳನ್ನು ಅದುವರೆಗೂ ಕಾರಿನ ಕನ್ನಡಿಯಲ್ಲಿ ನೋಡುತಿದ್ದ ವಾಗಿ, "ಲೇ ಯಾಕ್ ಅಷ್ಟೋಂದು ಒದ್ದಾಡ್ತಾ ಇದೀಯಾ... ಯಾವ್ದಾದ್ರು ಒಳೆ ಸಾಂಗ್ ಹಾಕ್ತೀನಿ ತಡೀ..." ಎಂದು, ಕಾರಿನಲಿದ್ದ ಸಿ.ಡಿ. ಒಂದನ್ನು ತೆಗೆದು ತನ್ನ ಮ್ಯುಸಿಕ್ ಸಿಸ್ಟಂನೊಳಗೆ ಜಾರಿಸಿದನು. ಎಲ್ಲಿ ರಾಜು ಮತ್ತೆ ಎದ್ದು ಬಿಡ್ತಾನೋ ಅನ್ನೋ ಹೆದರಿಕೆಯಿಂದ ಸ್ವಲ್ಪ ಕೆಳ ಧ್ವನಿಯಲ್ಲಿ ಇಬ್ಬರೂ ಹಾಡಿನ ಮಜಾ ತಗೊಳೋಕೆ ಶುರು ಹಚ್ಚಿದ್ರು. ಇದರಲ್ಲಿ ವಾಗಿಯ ಸ್ವಾರ್ಥವೂ ಇತ್ತು ಬಿಡ್ರಿ... ಹಾಡ್ ಹಾಕಿರೋದ್ರಿಂದ ಭಟ್ಟ ಎಚ್ಚರವಾಗಿರ್ತಾನೆ. ಸೋ... ನನ್ಗೆ ಡ್ರೈವ್ ಮಾಡೋವಾಗ ಒಳ್ಳೆ ಸಾಥ್ ಕೊಡ್ತಾನೆ ಅನ್ನೋ ಒಂದು ಚಿಕ್ಕ ಸ್ವಾರ್ಥ... ಅಷ್ಟೆ!
ರಾತ್ರಿಯ ಸಮಯ ಸುಮಾರು ೧೧:೪೫... ಶಿರಾದಿಂದ ಸ್ವಲ್ಪ ದೂರದ ಬಳಿ...
ಮ್ಯುಸಿಕ್ ಸಿಸ್ಟಂನಿಂದ ಮೆಲು ಧ್ವನಿಯಲ್ಲಿ ಕೇಳಿಬರುತ್ತಿದ್ದ ’ಡಾನ್" ಚಿತ್ರದ, "... ಮುಝ್ಕೊ ಪೆಹೆಚಾನುಲೋ... ಮೆ ಹೂ ಡಾನ್..." ಕೆಳುತ್ತಾ, ಅದು ಇದು ಅಂತ ಶುಂಟಿ ಸುಡುಗಾಡು ವಿಷಯಗಳ ಬಗ್ಗೆ ಹರಟುತ್ತಾ ಹೊರಟಿದ್ದರು. ಶಿರಾದಿಂದ ಸ್ವಲ್ಪ ದೂರದ ಬಳಿ ಬರುತ್ತಿದ್ದಂತೆ ಅವರಿಗೆ ಯಾರೋ ತಮ್ಮ ಕಾರಿಗೆ ಕೈ ಮಾಡುತ್ತಿರುವುದು ಕಂಡು ಬಂತು. ಕಾರನ್ನು ಹಾಗೆ ಹತ್ರಕ್ಕೆ ತಗೋತಿದ್ದ ಹಾಗೆ ತಮ್ಮ ಕಾರಿಗೆ ಕೈ ಮಾಡಿದ್ದು ಒಬ್ಬ ಮುದುಕ ಎಂದು ತಿಳಿದು ಬಂತು. ಕುರುಚಲು ಗಡ್ದ, ಒಗೆತವೇ ಕಾಣದ ಬಿಳಿ(?) ಬಣ್ಣದ ಕುರ್ತಾ ಹಾಕಿದ್ದ ಅವನು ಸುಮಾರು ೬೦ ವರ್ಷದವನಂತೆ ಕಾಣುತಿದ್ದ. ತನ್ನ ಬಳಿಯಿದ್ದ ಒಂದು ಕಿಟ್ ಬ್ಯಾಗನ್ನು ರಸ್ತೆಗೆ ರೋಡ್ ಹಂಪಿನಂತೆ ಅಡ್ಡ ಇಟ್ಟು, "ದಯವಿಟ್ಟು ಯಾರಾದ್ರು ನಂಗೆ ಡ್ರಾಪ್ ಕೊಡ್ರಪ್ಪಾ..." ಅನ್ನೋ ರೀತೀಲಿ ಲಿಫ್ಟ್ ಕೇಳ್ತಾ ಇದ್ದ.
ವಾಗಿ ಕಾರನ್ನು ಗೊಣಗುತ್ತಲೇ ಅಜ್ಜನ ಬಳಿ ನಿಲ್ಲಿಸಿದ. ಕಾರು ನಿಲ್ಲಿಸುವುದನ್ನೇ ಕಾಯ್ತಾಯಿದ್ದ ಆ ಮುದುಕ, "ಬೇಟಾ ನನ್ಗೆ ಸ್ವಲ್ಪ ದೂರ್ದಲ್ಲಿ ಇಳ್ಕೊ ಬೇಕಿದೆ... ಥೋಡ ಡ್ರಾಪ್ ಕೊಡಿ..." ಅಂತ ಅಂಗಲಾಚಿದ. ತಾವು ಡ್ರೈವ್ ಮಾಡ್ತಾ ಇರೋದು ಹೈವೇನಲ್ಲಿ, ಅದೂ ರಾತ್ರಿ ಹೊತ್ನಲ್ಲಾದ್ದರಿಂದ್ದ, ಗುರುತು ಪರಿಚಯ ಇರದವರಿಗೆ ಡ್ರಾಪ್ ಕೊಡೋದು ಅಷ್ಟೋಂದು ಸೇಫ್ ಅಲ್ಲ ಅಂತ ವಾಗಿ ಕಾರನ್ನು ಮುಂದಕ್ಕೆ ಡ್ರೈವ್ ಮಾಡ್ಕೊಂಡು ಹೊರಟ. ಆಗ ಭಟ್ಟ ವಾಗಿಗೆ, "ಲೇ ನೀನ್ ಸ್ವಲ್ಪ ಓವರ್ ಕಾಶಿಯಸ್ಸಾಗಿ ಬಿಹೇವ್ ಮಾಡ್ದಿ ಅನ್ನುಸ್ತಾ ಐತಲೆ ನನಿಗೆ..." ಅಂದ. ಆಗ ವಾಗಿ ಹಿಂಬದಿಯ ಸೀಟಿನಲ್ಲಿದ್ದ ಭಟ್ಟನಿಗೆ ಹೇಳ್ದ, "ಲೇ ಆ ಅಜ್ಜ ಯಾರೋ ಏನೋ ಒಂದೊ ಗೊತ್ತಿಲ್ಲಾ ಮಗಾ... ಕಾರ್ನ್ಯಾಗ್ ಕುಂದ್ರುಸ್ಕೊಳೊದ್ ಬ್ಯಾಡ್ಲೆ... ಸುಮ್ನೆ ರಿಸ್ಕ್ ಯಾಕೆ?". ಭಟ್ಟನಿಗೆ ಅಜ್ಜನ ಮೇಲೆ ಅದ್ಯಾವಾಗ್ ಕನಿಕರ ಮೂಡಿತೊ ಕಾಣೆ, ಹಿಡಿದ ಪಟ್ಟು ಬಿಡ್ಲೆವಲ್ಲಾ. "ಲೇ ವಾಗಿ ಪಾಪ ಅಜ್ಜ ಒಬ್ನೆ ಇದಾನ್ಲೆ... ರಾತ್ರಿ ಟೈಮ್ ಬೇರೆ... ಎನೋ ಇಲ್ಲೆ ಸ್ವಲ್ಪ ದೂರದ್ ಮಟ ಡ್ರಾಪ್ ಕೇಳ್ತಾಯಿದ್ದಾನೆ.. ಡ್ರಾಪ್ ಮಾಡೋದ್ರಾಗ್ ಏನೂ ಪ್ರಾಬ್ಲಮ್ ಆಗಂಗಿಲ್ಲ... ನಾ ಹೇಳದ್ ಕೇಳು, ಆ ಅಜ್ಜಂಗೆ ಡ್ರಾಪ್ ಕೊಡೋಣ...". ಒಲ್ಲದ ಮನಸ್ಸಿನಿಂದ ವಾಗಿ, ಭಟ್ಟನ ಅಧಿಕ ಪ್ರಸಂಗತನಕ್ಕೆ ಮನಸ್ಸಿನಲ್ಲೇ ಹಿಡಿ ಶಾಪ ಹಾಕಿ ಕಾರನ್ನು ಹಿಂದ್ದಕ್ಕೆ ತಗೊಂಡ...
ಪುನಃ ರಿಟರ್ನ್ ಆದ ಕಾರನ್ನು ಕಂಡ ಮುದುಕ ಸ್ವಲ್ಪ ಚಿಯರ್ ಅಪ್ ಆದವನಂತೆ ಕಂಡು ಬಂದ. ಈ ಬಾರಿ ಭಟ್ಟ ಹಿಂಬದಿಯ ಕಾರ್ ಡೋರನ್ನು ತೆಗೆದು, "ಕ್ಯಾ ಮಿಯಾ ಕಿದರ್ ಜಾನಾ ಹೈ ಆಪ್ಕೋ?" ಎಂದು ಕೇಳಿದ. "ಯಹೀ ಪಾಸ್ ಮೇ ಹೀ ಉತರ್ ಜಾವೂಂಗಾ" ಅಂತ ಹೇಳ್ದೋನೇ, ತನ್ನ ಕಿಟ್ ಬ್ಯಾಗನ್ನು ಬ್ಯಾಕ್ ಸೀಟ್ನಲ್ಲಿ ಇಟ್ಟು ತಾನೂ ಕಾರೊಳಗೆ ಸೇರ್ಕೊಂಡ್ಬಿಟ್ಟ. ಇವೆಲ್ಲದಕ್ಕೂ ನನ್ಗೂ ಸಂಬಂಧವೇ ಇಲ್ಲವೇನೋ ಎಂಬಂತೆ ರಾಜು ಮುಂಬದಿಯ ಸೀಟಿನಲ್ಲಿ ಡೀಪ್ ಸ್ಲೀಪ್ಗೆ ರಿಟೈರ್ ಆಗಿದ್ದ!
ರಾತ್ರಿಯ ಸಮಯ ಸುಮಾರು ೧೨:೪೫... ಹೈವೇದಾಗ್ ಎಲ್ಲೋ...
ವಾಗಿಗೋ ಭಟ್ಟನ ಮೇಲೆ ಎಲ್ಲಿಲ್ಲದ ಕೋಪ. ಅದನ್ನ ಹೇಳ್ಕೋಳೋ ಹಂಗಿಲ್ಲ ಬಿಡಂಗೂ ಇಲ್ಲದಂತಹ ಧರ್ಮ ಸಂಕಟ! ಮುದುಕ ಆಗ್ ಇಳೀತಾನೆ ಈಗ್ ಇಳೀತಾನೆ ಅಂತ ಡ್ರೈವ್ ಮಾಡ್ತಾನೆ ಇದ್ದ ವಾಗಿ... ಸುಮಾರು ೧ ಘಂಟೆಯ ನಂತರ ವಾಗಿಗೆ ತಡ್ಕೋಳೊಕೆ ಆಗ್ಲೇ ಇಲ್ಲ. ಅವನು ಭಟ್ಟನನ್ನು ನೋಡಿ, "ಲೇ ಅವನು ಯಾವಾಗ ಇಳೀತಾನ್ ಕೇಳಲೇ?" ಅಂತ, ತನ್ನೋಳಗಿದ್ದ ಅಸಮಾಧಾನವನ್ನೆಲ್ಲಾ ಒಮ್ಮೆಲೆ ಹೊರಹಾಕಿದ. ಭಟ್ಟ ಅಜನ್ನನ್ನು ಕೇಳಿದ,"ಕ್ಯಾ ಮಿಯಾ ಆಪ್ ಥೋಡಿ ದೇರ್ ಕರ್ಕೋ ಬೋಲೆ... ಲೇಕಿನ್ ೧ ಘಂಟಾ ಹೋಗಯಾ? ಠೀಕ್ಸೇ ಬತಾವ್ ಆಪ್ಕೋ ಕಿದರ್ ಉತರ್ನಾ ಹೈ..." ಎಂದು ಸ್ವಲ್ಪ ಜೋರಾಗಿಯೇ ಕೇಳಿದ. ಅದಕ್ಕೆ ಅಜ್ಜ, "ಬಸ್ ಥೋಡಿ ದೇರ್ ಔರ್ ಬೇಟಾ... ಉಸ್ಕೆ ಬಾದ್ ಲೆಫ್ಟ್ ಮೇ ಲೇಲೋ..." ಅಂತ ಹೇಳಿದ.
ರಾತ್ರಿಯ ಸಮಯ ಸುಮಾರು ೧:೧೦... ಮಡ್ ರೋಡ್ ಕಡೆ ಹೋಗೊ ಡೀವಿಯೇಶನ್ ಬಳಿ...
ಆದರೆ ಈ ಬಾರಿ ಅಜ್ಜ ಹೇಳಿದ್ದು ನಿಜವಾಗಿತ್ತು. ಸುಮಾರು ೨೫ ನಿಮಿಷ ಡ್ರೈವ್ ಮಾಡಿದ ಬಳಿಕ ಹೈವೆಯ ಬದಿಯಲ್ಲಿ ಒಂದು ಮಡ್ ರೋಡ್ ಕಂಡು ಬಂತು. ಕೂಡಲೆ ವಾಗಿ ಭಟ್ಟಂಗೆ ಕೇಳ್ದಾ, "ಇದೇ ಏನ್ಲೇ ಆ ರೋಡ್?" ಆಗ ಅಜ್ಜ ಮಧ್ಯ ಬಾಯಿ ಹಾಕಿ, "ಯಹೀ ಲೆಫ್ಟ್ ಮೆ ಲೋ ಬೇಟಾ..." ಎಂದ. ವಾಗಿಯ ಮುಖದಲ್ಲಿ ನಗು ಪುನಃ ಮರಳುವ ಸೂಚನೆ ಕಂಡು ಬಂದವು. ಕೊನೆಗೂ ಈ ಅಜ್ಜನ್ನಿಂದ ಮುಕ್ತಿ ಸಿಗ್ತಲ್ಲಾ ಅಂತ ಖುಶಿ ಖುಶಿಯಿಂದಲೇ ಅಜ್ಜ ಹೇಳಿದ ಮಾರ್ಗವಾಗಿ ಗಾಡಿ ಡ್ರೈವ್ ಮಾಡ್ತಾ ಹೋದ. ಹಿಂಬದಿಯ ಸೀಟಿನಲ್ಲಿ ಕೂತಿದ್ದ ಭಟ್ಟ ಇದ್ದಕಿದ್ದ ಹಾಗೆ ವಾಗಿಗೆ ಹೇಳ್ದ, "ಎನ್ಲೆ ಇದು... ಇಲ್ಲಿ ಒಂದೇ ಒಂದು ಮನೇನೂ ಇಲ್ಲ. ಈ ಅಜ್ಜ ಏನ್ ಕಾಡಿನಲ್ಲಿ ಇರ್ತಾನೋ ಹೆಂಗೆ?" ಅಂತ ಕೇಳ್ದಾಗ್ಲೆ, ವಾಗಿಗೆ ತೋಚಿದ್ದು ತಾನೆಲ್ಲಿ ಡ್ರೈವ್ ಮಡ್ಕೋಂಡು ಬರ್ತಾ ಇದ್ದೀನಿ ಅಂತ... ಅಷ್ಟೋತ್ತಿಗಾಗ್ಲೆ ಹೈವೇಯಿಂದ ಸುಮಾರು ದೂರ ಬಂದಾಗಿತ್ತು. ಅವರು ಹೋದಂತಹ ರೋಡ್ನ ಆಜು ಬಾಜುಬಲ್ಲಿ ಕಗ್ಗತ್ತಲು. ಅಲ್ಲಿ ಯಾರು ತಲೆ ಹೊಡ್ದ್ರೂ ಗೊತ್ತಾಗಲ್ಲ, ಅಂಥ ಜಾಗ ಅದು! ಮೊದಲ ಬಾರಿಗೆ ಭಟ್ಟನಿಗೆ, ಆ ಅಜ್ಜನಿಗೆ ನಾವು ಯಾಕಾದ್ರು ಡ್ರಾಪ್ ಕೊಡೋಕೆ ಒಪ್ಪಿಕೊಂಡೆವು ಅಂತ ಅನ್ನಿಸೋದಕ್ಕೆ ಶುರುವಾಯಿತು. ಆದರೆ ಅದನ್ನು ಬಾಯಿ ಬಿಟ್ಟು ಹೇಳಂಗಿಲ್ಲ, ಯಾಕಂದ್ರೆ ಅವ್ನೆ ಪಾಪ ಹೋಗ್ಲಿ ಬಿಡು ಅಂತ ಆ ಅಜ್ಜನನ್ನು ಹತ್ಸ್ಕೊಂಡಿದ್ದು! ಮೊದಲ ಬಾರಿಗೆ ಅವರಿಬ್ಬರಿಗೂ ಅಜ್ಜನ ಮೇಲೆ ಸಂದೇಹ ಮೂಡಲು ಶುರುವಾಯಿತು. ಮನಸ್ಸಿನ ಮೂಲೆಯಲ್ಲೆಲ್ಲೋ ಭಯ ಚಿಗುರೊಡೆಯೋದಕ್ಕೆ ಪ್ರಾರಂಭವಾಯಿತು. ಇಷ್ಟೊತ್ತೂ ಹೋಡ್ಕೊತಾ ಇದ್ದ ಮ್ಯೂಸಿಕ್ ಸಿಸ್ಟಮ್ ಈಗ ಏಕ್ ದಮ್ ಬಂದ್! ಇಬ್ಬರಿಗೂ ತಮ್ಮ ಎದೆಯ ಬಡಿತ ಸ್ಪಷ್ಟವಾಗಿ ಕೇಳಿಸ್ತಾ ಇತ್ತು!
ರಾತ್ರಿಯ ಸಮಯ ಸುಮಾರು ೧:೨೫... ಕಗ್ಗತ್ತಲೇ ಇರುವಂತಹ ನಿರ್ಜನ ಪ್ರದೇಶ...
ಯಾರೊಬ್ಬ ನರಪಿಳ್ಳೆಯೂ ಸುಳಿಯದಂತಹ ದಟ್ಟ ಕಾಡಿನಲ್ಲಿ ಚಲಿಸುತ್ತಿರುವಂತಹ ಅನುಭವದ ಮಧ್ಯೆಯೇ ಆ ಅಜ್ಜ ಇವರ ಮೌನವನ್ನು ಮುರಿದ. "ಆ ಗಯಾ ಬೇಟಾ... ವಹಾ ರೈಟ್ ಮೇ ಜೋ ಘರ್ ಹೈನಾ... ವಹೀ" ಅಂತಾ ತನ್ನ ಬೆರಳಿನಿಂದ ತೋರಿಸ್ತಾ ಹೇಳಿದ. ಅಜ್ಜನು ತೋರಿಸಿದ ಮನೆಯು ಒಂದು ಹಳೆಯ ಕಾಲದ ಹಂಚಿನ ಮನೆಯಂತೆ ಕಂಡು ಬಂತು. ಅಜ್ಜನ ಮನೆಯ ಮುಂದೆಯೂ ಘೊರ ಕಗ್ಗತ್ತಲು. ಬಹುಶಃ ಅಲ್ಲಿ ಅಜ್ಜನನ್ನು ಬಿಟ್ಟರ್ಎ ಬೇರಾರೂ ವಾಸ ಮಾಡ್ತಾ ಇರ್ಲಿಲ್ಲಾ ಅಂತ ಯಾರು ಬೇಕಾದ್ರು ಸರ್ಟಿಫಿಕೇಟ್ ಕೊಡ್ಬೋದಿತ್ತು. ಅಜ್ಜನ ಮನೆಯ ಮುಂದೆ ಕೇವಲ ಒಂದು ಗಾಡಿ ಹೋಗೋ ಅಷ್ಟು ಜಾಗ ಮಾತ್ರ ಇತ್ತು. ವಾಗಿ ಗಾಡಿಯನ್ನು ಸೀದಾ ಅಜ್ಜನ ಮನೆಯ ಮುಂದೆ ನಿಲ್ಲಿಸಿ, "ಲೇ ಅಜ್ಜಂಗೆ ಬಡ ಬಡ ಇಳ್ಕೋ ಅಂತ ಹೇಳು..." ಎಂದು ಭಟ್ಟನಿಗೆ ಆರ್ಡರ್ ಮಾಡುವ ಧ್ವನಿಯಲ್ಲಿ ಹೇಳಿದ. ಇವನ ಮಾತು ಅರ್ಥ ಮಾಡ್ಕೊಂಡೋನ ಹಾಗೆ, ಸರ ಸರನೆ ಕಾರಿನಿಂದ ಇಳಿದು ಮನೆಯ ಕಡೆಗೆ ಹೋದ. ಕಾರಿನ ಬೆಳುಕಿನಲ್ಲಿ, ಅಜ್ಜನು ಆ ಮನೆಯ ಮರದ ಗೇಟ್ ತೆಗೆದು ಒಳ ಹೋಗಿದ್ದು ಸ್ಪಷ್ಟವಾಗಿ ಕಂಡಿತು. ಇದ್ದಕ್ಕಿದ್ದಂತೆ ವಾಗಿ ಜೋರಾಗಿ, ಸ್ವಲ್ಪ ಸಿಟ್ಟಿನಿಂದಾನೇ ಭಟ್ಟನಿಗೆ ಹೇಳ್ದ, "ಲೇ ಅಜ್ಜ ಬ್ಯಾಗ್ ಇಲ್ಲೇ ಬಿಟ್ಟ್ ಹೋದ್ನಲ್ಲೋ... ಕರಿಯಲೇ ಅವನ್ನಾ..." ಎಂದ. ಅದಕ್ಕೆ ಭಟ್ಟ, ಅದ್ರಲೇನಿದೆ ದೊಡ್ಡ ವಿಷಯ ಎಂಬಂತೆ, "ಲೇ.., ಮೋಸ್ಟ್ಲಿ ಅಜ್ಜ ಲೈಟ್ ಆನ್ ಮಾಡ್ ಬರಕ್ಕೆ ಹೋಗಿರಬಹುದು... ಬರ್ತಾನ್ ಬಿಡು ಟೆನ್ಷನ್ ಯಾಕೆ ಮಾಡ್ಕೊತೀಯಾ?" ಅಂತ ತನ್ನ ಸೋಮಾರಿತನವನ್ನು ಮರೆಮಾಚಲು ಕುಂಟು ನೆಪ ಹೇಳಿ ಬಿಟ್ಟ. ಅದಕ್ಕೆ ವಾಗಿ ನೀಡಿದ ಉತ್ತರ ಕೇಳಿ ಭಟ್ಟನಲ್ಲಿ ಇದ್ದ ಅಲ್ಪ ಸ್ವಲ್ಪ ಧೈರ್ಯಾನೂ ಮಾಯವಾಯಿತು. ವಾಗಿ ಹೇಳ್ದ, "ಲೇ... ಅವಾಗ್ಲಿಂದ ನಾನೆ ಡ್ರೈವ್ ಮಾಡ್ಕೋಂಡ್ ಬರ್ತಾ ಇದೀನೀ, ಒಂದೇ ಒಂದು ಎಲೆಕ್ಟ್ರಿಕ್ ಕಂಬಾನೂ ಕಣ್ಣಿಗೆ ಬಿದ್ದಿಲ್ಲಾ... ಲೈಟ್ ಆನ್ ಮಾಡೋಕ್ಕೆ ಹೋದ ಅಂತೀಯಲ್ಲಾ... ನಿನಿಗ್ ಏನ್ ಹೇಳ್ಲಿ?" ಎಂದ. ಭಟ್ಟನಿಗೆ ಆಗ ಏನ್ ಹೇಳ್ಬೇಕೋ ತಿಳೀಲೇ ಇಲ್ಲ. ಆದ್ರೂ ಅಜ್ಜನ ಮೇಲೆ ಮಹಾ ನಂಬಿಕೆ ಉಳ್ಳವನಂತೆ, "ವಾಗಿ... ಅಜ್ಜ ಏನ್ ಓಡಿ ಹೋಗಲ್ಲ... ಬರ್ತಾನೆ ಬಿಡ್ಲೇ... ನೋಡಪ್ಪಾ ೫ ಐದ್ ನಿಮಿಷ ವೇಟ್ ಮಾಡೋಣ... ಬಂದಿಲ್ಲಾ ಅಂದ್ರೆ... ಮುಂದೆ ಏನ್ ಮಾಡಬೇಕೂ ಅಂತ ನೋಡೋಣ..." ಎಂದು ಹೇಳ್ದ. ಭಟ್ಟನ ಮಾತು ಕೆಲ್ಸ ಮಾಡ್ತು ಅಂತ ಕಾಣುತ್ತೆ, ವಾಗಿ ಸ್ವಲ್ಪ ಹೊತ್ತು ಕಾಯೋದಕ್ಕೆ ಒಪ್ಕೊಂಡ.
ರಾತ್ರಿಯ ಸಮಯ ಸುಮಾರು ೧:೩೫... ಅಜ್ಜನ ಮನೆಯ ಮುಂದೆ...
೫ ನಿಮಿಷ ಆಯಿತು, ೧೦ ನಿಮಿಷ ಆಯಿತು ಆ ಅಜ್ಜ ಹೋರ ಬರುವ ಲಕ್ಷಣಗಳೇ ಕಾಣ್ತಾಯಿಲ್ಲಾ... ವಾಗಿಗೆ ಪಿತ್ತ ನೆತ್ತಿಗೇರಿತು... ಬಹಳ ಕೋಪದಿಂದಲೇ ಭಟ್ಟನಿಗೆ, "ಲೇ ಅಜ್ಜ ಯಾಕೋ ಹೋರಗೆ ಬರುವಹಾಗೆ ಕಾಣ್ತಾ ಇಲ್ಲ... ನಾನ್ ಎಷ್ಟು ಬ್ಯಾಡ ಬ್ಯಾಡ ಅಂದ್ರೂ ನೀನೇ ಅವನನ್ನ ಹತ್ತುಸ್ಕೋ ಅಂದ್ದಿದ್ದು... ಅದೇನ್ ಮಾಡ್ತೀಯೋ ಗೊತ್ತಿಲ್ಲ... ಹೋಗಿ ಅಜ್ಜ ಎಲ್ಲಿದ್ದಾನೆ ಅಂತ ನೋಡ್ಕೋಂಡ್ ಬಾ.." ಅಂತ ಹೇಳಿದ. ಆಗಲೇ ಫ್ಯೂಸ್ ಔಟಾಗಿದ್ದ ಭಟ್ಟ ವಿಧಿ ಇಲ್ದೆ, ಒಲ್ಲದ ಮನಸ್ಸಿನಿಂದ ಕಾರಿಂದ ಇಳಿದ... ಕಾರಿನ ಹೆಡ್ ಲೈಟ್ ಚೆಲ್ಲುತ್ತಿದ್ದ ಬೆಳಕಿನಲ್ಲೇ ಅವನೂ ಸಹ, "ನಾನ್ ಯಾಕಾದ್ರೂ ಆ ಅಜ್ಜನಿಗೆ ಲಿಫ್ಟ್ ಕೊಡ್ಸಿದ್ನೋ..." ಅಂತ ಗೊಣುಗುತ್ತಾ, ಅಜ್ಜನ ಮನೆಯ ಗೇಟ್ ತೆಗೆದು ಒಳಕ್ಕೆ ಹೋದ. ಕಾರು ಕೇವಲ ೧೦ ಅಡಿಯ ದೂರದಲ್ಲಿಯೇ ಪಾರ್ಕ್ ಆಗಿದ್ದರಿಂದ, ಭಟ್ಟನಿಗೆ ಏನೋ ಒಂದು ರೀತಿಯ ಧೈರ್ಯ. ಅಕಸ್ಮತ್ ಏನಾದ್ರೂ ಎಡ್ವಟ್ಟಾದ್ರೆ, ವಾಗಿ ಹೆಲ್ಪಿಗೆ ಬಂದೇ ಬರ್ತಾನೇ ಅನ್ನೋ ಖಾತ್ರಿ!
ಇಷ್ಟೊತ್ತಿಗೆ ಅಜ್ಜ ಕಡೆ ಪಕ್ಷ ಸೀಮೇ ಎಣ್ಣೆಯ ಬುಡ್ಡಿಯನ್ನಾದ್ರೂ ಹಚ್ಚಿರ್ ಬೋದು ಅಂತ ಎಣಿಸಿ, ಭಟ್ಟ, "ಮಿಯಾ... ಆಪ್ ಕಿದರ್ ಹೈ... ಘರ್ ಮೇ ಕೊಯಿ ಹೈ..." ಅಂತ ಕೊಂಚ ಹಿಂಜರಿಕೆಯಿಂದಲೇ ಆವಾಜ಼್ ಹಾಕ್ತ ಇದ್ದ... ಆದರೆ ಮನೆಯೊಳಗಿಂದ ಒಬ್ಬರೂ ಕಮಕ್ ಕಿಮಕ್ ಅನ್ನಲಿಲ್ಲ... ಭಟ್ಟ ಹಾಗೇ ಒಮ್ಮೆ ಕಾರಿನೆಡೆಗೆ ತಿರುಗಿ, "ಲೇ... ಏನ್ ಮಾಡ್ಲಿ? ಅಜ್ಜ ರಿಪ್ಲೈ ಮಾಡ್ತಾ ಇಲ್ಲ..." ಅಂತ ತನ್ನ ನಿಸ್ಸಹಾಯಕ ಸ್ಥಿತಿ ಸೂಚಿಸಿದ. ಆಗ ವಾಗಿ, "ಲೇ... ಅಲ್ಲೇ ಒಳಗಡೆ ಇರ್ತಾನೇ, ಸ್ವಲ್ಪ ಜೋರಾಗಿ ಬಾಗ್ಲಾ ಬಡಿ... " ಅಂದ. ವಾಗಿಯ ಮಾತನ್ನು ತಳ್ಳಿ ಹಾಕುವ ಪ್ರಶ್ನೆಯೇ ಇರಲಿಲ್ಲ.
ತನ್ನ ಬಳಿ ಇದ್ದ ನೋಕಿಯಾ ೧೧೧೨ ಹ್ಯಾಂಡ್ ಸೆಟ್ಟಿನಿಂದ ಚೆಲ್ಲುತ್ತಿದ್ದ ಅಲ್ಪ ಸ್ವಲ್ಪ ಬೆಳುಕಿನಲ್ಲೇ, ಉಳಿದ ಪಳಿದ ಎಲ್ಲಾ ಧೈರ್ಯವನ್ನೂ ಒಟ್ಟುಗೂಡಿಸಿ, ಭಟ್ಟ ಮನೆಯೋಳಗೆ ಕಾಲ್ ಇಟ್ಟೇ ಬಿಟ್ಟ... ಮನೆಯೋಳಗೆ ಯಾರೋಬ್ಬರು ಇದ್ದಂಗೆ ಕಾಣಿಸುತ್ತಿರಲ್ಲಿಲ್ಲ... ಮನೇ ಪೂರ್ತಿ ಜಾಲಾಡೀದ್ರೂ ಯಾವನೇ ಒಬ್ಬ ನರಪಿಳ್ಳೆಯೂ ಕಣ್ಣಿಗೆ ಕಾಣಲಿಲ್ಲ... ಆ ಅಜ್ಜ ಏನಾದ್ರೂ ಮನೆಯ ಸೈಡಿಗಿದ್ದ ಜಾಗಕ್ಕೆ ಹೋಗ್ಯಾನ ಅಂತ ನೋಡಲು ಭಟ್ಟ ಮನೆಯ ಸುತ್ತ ಮುತ್ತಾನೂ ಜಾಲಾಡಿದ... ಯಾವಗ್ ಆ ಅಜ್ಜನ ಸುಳಿವು ಅವನಿಗೆ ಸಿಗಲಿಲ್ಲವೋ ಅವನಿಗೆ ಒಂದು ರೀತಿಯ ಡರ್ ಹೋಡೆಯಲು ಶುರುವಾಯಿತು... ಅಲ್ಲೆನೋ ಫಾಲ್ಟ್ ಹೋಡ್ದಿದೆ ಅನ್ನುವುದು ಅವನಿಗೆ ಖಾತ್ರಿಯಾಗ್ ಹೋಯ್ತು!
ಅಲ್ಲಿಂದ ಎದ್ನೋ ಬಿದ್ನೋ ಅಂತ ಓಡೋಡಿ ಕಾರ್ ಬಳಿ ಬಂದು... "ವಾಗಿ... ಗಡಾ ಕಾರ್ ವಾಪಸ್ ತಕ್ಕ... ಮನೇ ಪೂರ್ತಿ ಸ್ಕ್ಯಾನ್ ಹೋಡ್ದೀನಿ... ಆ ಅಜ್ಜ ಎಲ್ಲೂ ಇಲ್ಲಾ ಲೇ... ಇಲ್ಲೇನೋ ಆಗೈತ್ಲೇ... ಫಸ್ಟ್ ಗಾಡಿ ರಿವರ್ಸ್ ತಗೋ..." ಎಂದು ಒಂದೇ ಸಮನೆ ಪೀಡಿಸತೊಡಗಿದ... ಇಷ್ಟೆಲ್ಲಾ ಆದ್ರೂ ರಾಜು ಮಾತ್ರ ನಿದ್ರೆಯಿಂದ ಏಳಲೇ ಇಲ್ಲ... ಭಟ್ಟ ತನಗೆ ಹೇಳಬೇಕದ್ದನೆಲ್ಲಾ ಒಂದೇ ಉಸಿರಿಗೆ ಹೇಳ್ದೋನೆ ಅವಸರ ಅವಸರವಾಗಿ ಕಾರಿನ ಹಿಂಬದಿಯ ಸೀಟಿನಲ್ಲಿ ಭದ್ರವಾಗಿ ತಳವೂರಿಬಿಟ್ಟ... ವಾಗಿಗೂ ಏನೂ ತೊಚದಂತಾಗಿ, ತಾವು ಯಾಕಾದ್ರೂ ಇಲ್ಲಿಗೆ ಬರೋಕ್ಕೆ ಹೋದ್ವೋ ಅಂತ ಅಂದ್ಕೊಂಡು ಗಾಡಿಯನ್ನು ರಿವರ್ಸ್ ತಗೋಂಡು ಸೀದಾ ಹೈವೇ ಕಡೆಗೆ ಹೊರಟ್ ಬಿಟ್ಟ...
ರಾತ್ರಿಯ ಸಮಯ ಸುಮಾರು ೨:೦೫... ಪುನಃ ಪುಣೆ ಬೆಂಗಳೂರು ಹೆದ್ದಾರಿಯಲ್ಲಿ...
ಯಾವಗ್ ಹೈವೆ ಸಿಗುತ್ತಪ್ಪಾ ಅಂತ ಎದುರು ನೋಡುತ್ತಾ ಡ್ರೈವ್ ಮಾಡ್ಕೋಂಡು ಬಂದ ವಾಗಿಗೆ ತನ್ನ ಜೀವ ಉಳೀತೂ ಅಂತ ಅನ್ಸಿದ್ದೆ ಪುನಃ ಹೆದ್ದಾರಿ ರೀಚ್ ಆದಾಗ... ಬದುಕೋಂಡ್ಯಾ ಬಡ್ ಜೀವೀ ಅಂತ ನಿಟ್ಟಿಸಿರು ಬಿಡುತ್ತಾ ಭಟ್ಟ ಹಾಗು ವಾಗಿ ದಾವಣಗೆರೆ ಬರುವುದನ್ನೇ ಕಾಯುತ್ತಾ ಇದ್ದರು. ಸ್ವಲ್ಪ ಸಮಯದ ನಂತರ ವಾಗಿ, "ಭಟ್ಟ... ನೋಡ್ಲೆ... ಹ್ಯಾಂಗೆ ಮೈಮ್ಯಾಗೆ ಹರಾಸ್ ಇಲ್ಲ್ದೋರಹಂಗೆ ಬಿದ್ಕೋಂಡಾನೇ ಭೂಪ..." ಅಂತ ರಾಜೂನ ತೋರಿಸಿ ಹೇಳ್ದ. ಆ ಟೈಮಿಗಾಗಲೆ ಸ್ವಲ್ಪ ಚೇತರಿಸಿಕೊಂಡಿದ್ದ ಭಟ್ಟ ಏನೋ ನಗ್ ಬೇಕಲ್ಲಾ ಅಂತ ಒಲ್ಲದ ಮನಸ್ಸಿನಿಂದ ನಕ್ಕು ಸುಮ್ಮನಾಗಿ ಬಿಟ್ಟ. ಆದ್ರೂ ಇಬ್ಬರಿಗೂ ಒಳ್ಗೋಳಗೆ ತೀಳಿದಿದ್ದ ಸತ್ಯ ಏನಪ್ಪಾ ಅಂದರೆ, ಇದೆಲ್ಲಾ ತಮ್ಮಲ್ಲಿದ್ದ ಹೆದರಿಕೆಯನ್ನು ಮರೆಮಾಚೊದಕ್ಕೇನೇ ಹೀಗೆ ಮಾಡ್ತಾಯಿದ್ದೀವಿ ಅಂತ... ಅವರ ಬಳಿ ಬೇರೆ ದಾರೀನೆ ಇರ್ಲಿಲ್ಲಾ... ಅವರು ಯಾವಾಗ್ ದಾವಣಗೆರೆ ತಲುಪುತ್ತೇವೋ ಅಂತ ಯೋಚನೆ ಮಾಡ್ತಾ ಇದ್ರು...
ಮುಂಜಾನೆಯ ಸಮಯ ಸುಮಾರು ೫:೨೫... ದಾವಣಗೆರೆಯ ಹೊರವಲಯದಲ್ಲಿ ...
ದಾವಣಗೆರೆ ಮುಟ್ಟುತ್ತಿದ್ದಂತೆ ಇಬ್ಬರಿಗೂ ಒಂದು ರೀತಿಯ ಸಮಧಾನ. ಹೋದ ಜೀವ ಬಂದ ಹಾಗಾಯಿತು... ಇನ್ನೂ ಕತ್ತಲೆಯೇ ಆವರಿಸಿದ್ದ ಆಕಾಶ, ನಾಳೆಯನ್ನು ಬರಮಾಡಿಕೋಳ್ಳಲು ಇನ್ನು ಪ್ರಿಪೇರ್ ಆಗ್ತಾ ಇತ್ತು... ಕೆಲ ಸಮಯದ ಬಳಿಕ ವಾಗಿಯ ಮನೆ ಮುಂದೆ ಕಾರು ನಿಂತಿತು... ರಾತ್ರಿಯಿಡಿ ಆ ಅಜ್ಜನ ಸಲುವಾಗಿ ಎಚ್ಚರದಿಂದಿರಬೇಕಾಗಿದ್ದ ಕಾರಣ ಇಬ್ಬರಿಗೂ ಯಾವಾಗ್ ಮಲಗಿಕೊಂಡೆವೋ ಅಂತ... ಇತ್ತ ಆರಾಮಾಗಿಯೇ ನಿದ್ರೆ ಮಾಡುತ್ತಿದ್ದ ರಾಜುವನ್ನು ಇಬ್ಬರೂ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಒಂದು ರೂಮಿನಲ್ಲಿ ’ಬಿಸಾಡಿ’, ತಾವು ಹಾಲ್ನಲ್ಲೆ ಬಿದ್ದು ಕೊಂಡರು...
ಬೆಳಿಗ್ಗೆ ಸಮಯ ಸುಮಾರು ೯:೪೫... ವಾಗಿಯ ಮನೆಯ ಒಳಗೆ...
ಹಿಂದಿನ ರಾತ್ರಿಯ ಬಗ್ಗೆ ಏನೂ ಗೊತ್ತಿರದ ರಾಜು ಕಣ್ ಬಿಟ್ಟಾಗ ತಿಳಿದಿದ್ದು, ತಾನು ವಾಗಿಯ ಮನೇಲಿದ್ದೇನೆ ಅಂತ... ಎದ್ದವನೇ ಸೀದಾ ಹಾಲಿಗೆ ಬಂದು, ಗಾಢವಾದ ನಿದ್ರೆಯಲ್ಲಿದ್ದ ವಾಗಿ ಹಾಗು ಭಟ್ಟನನ್ನು ತಿವಿದು ತಿವಿದು, "ಲೇ... ಏಳ್ರಲೇ... ಏನ್ ಹಂಗ್ ಬಿದ್ಕೋಂಡಿದ್ದಿರಲ್ಲಾ... ಆಗ್ಲೇ ೧೦ ಘಂಟೆ ಆಗೋಕೆ ಬಂತು..." ಎಂದು ಒಂದೇ ಸಮನೇ ಕಾಡೋಕೆ ಶುರು ಮಾಡ್ದ... ಸುಮಾರು ಹೊತ್ತಿನ ಪ್ರಯತ್ನದ ಬಳಿಕ, ಇಬ್ಬರೂ ಎದ್ದರು... ಎಲ್ಲರೂ ತಮ್ಮ ತಮ್ಮ ನಿತ್ಯ ಕಾರ್ಯಗಳನ್ನು ಮುಗಿಸಿಕೊಂಡ ಬಳಿಕ, ಮನೆಯ ಬಳಿಯಿದ್ದ ಟೀ ಸ್ಟಾಲಿಗೆ ಹೋಗಿ ಒಂದು ಕಪ್ ಕಡಕ್ ಟೀ ಹೀರಿ ಬಂದರು...
ಬೆಳಿಗ್ಗೆಯ ಸಮಯ ಸುಮಾರು ೧೦:೪೫... ವಾಗಿ ಮನೆಯ ಹೊರಗೆ...
ಕಾರಿನ್ನೂ ಮನೆಯ ಮುಂದೇನೆ ಪಾರ್ಕ್ ಆಗಿದ್ದನ್ನು ನೋಡಿದ ವಾಗಿ, "ತಡೀಲೇ ಭಟ್ಟ... ಕಾರನ್ನ ಶೆಡ್ನಲ್ಲಿ ನಿಲ್ಲಿಸಿ ಬರ್ತೀನಿ.." ಅಂತ ಹೇಳಿ ಹೋದ. ಇನ್ನೇನು ಕಾರ್ ಬಾಗಿಲು ತೆಗೆದು ಒಳಗಡೆ ಕೂತ್ಕೋ ಬೇಕು, ಅವನ ದೃಷ್ಟಿ ಬ್ಯಾಕ್ ಸೀಟಿನಲ್ಲಿದ್ದ ಕಿಟ್ ಬ್ಯಾಗ ಕಡೆಗೆ ಬಿತ್ತು... ಒಂದು ಕ್ಷಣ ಹಿಂದಿನ ರಾತ್ರಿ ನಡೆದದ್ದೆಲ್ಲಾ ಕಣ್ಮುಂದೆ ಬಂದಂತಾಗಿ, "ಲೇ ಭಟ್ಟ... ಬೇಗ್ ಬಾರಲೇ... " ಅಂತ ಕಿರುಚಿದ.
ಇವನ್ಯಾಕಪ್ಪಾ ಹಿಂಗ್ ಕಿರುಚ್ಕೋಂಡ ಅಂತ ಭಟ್ಟ ಹಾಗು ರಾಜು ಇಬ್ಬರೂ ಅವನ ಬಳಿ ಓಡಿ ಬಂದರು. ವಾಗಿ ಕಾರಿನಲ್ಲಿದ್ದ ಆ ಬ್ಯಾಗನ್ನೇ ತೋರಿಸುತ್ತಾ ನಿಂತನು... ಭಟ್ಟನೂ ಕೆಲ ಕ್ಷಣ ಗರ ಬಡ್ದೋರಹಾಗೆ ನಿಂತು ಬಿಟ್ಟ... ಇವರಿಬ್ರೂ ಯಾಕ್ ಹಿಂಗೆ ಕರ್ಎಂಟ್ ಹೊಡ್ದ್ ಕಾಗಿ ಆದಂಗಾದ್ರು ಅಂತ ರಾಜು ವಿಚಾರ ಮಾಡಲು ಶುರು ಮಾಡ್ದ... ಆಗ ವಾಗಿ, "ಲೇ ಭಟ್ಟ ಎಂಥಾ ಕೆಲ್ಸ ಮಾಡ್ಬಿಟ್ವಲೆ ನಾವು... ಅಜ್ಜನ ಬ್ಯಾಗ್ನ್ ಹಾಗೇ ತಗೋಂಡ್ ಬಂದ್ ಬಿಟ್ವಲ್ಲೋ.." ಅಂತ ಆತಂಕ ವ್ಯಕ್ತ ಪಡಿಸಿದ. ಅಲ್ಲಿದ್ದ ೩ ವರಿಗೂ ಒಂದೇ ತೆರನಾದ ಕುತೂಹಲ. ಕೊನೇಗೂ ವಾಗಿ ಧೈರ್ಯ ಮಾಡಿ ಆ ಬ್ಯಾಗನ್ನು ಮನೆ ಒಳಗೆ ಹೋಗಿ ತೆರೆದೇ ಬಿಟ್ಟ...
ಬ್ಯಾಗ್ ಒಳಗಿದ್ದ ವಸ್ತುಗಳನ್ನು ನೋಡುತ್ತಿದ್ದಂತೆ, ಮೂವರೂ ಫ್ಯೂಸ್ ಔಟ್ ಆದವರಂತೆ, ಬಿಟ್ಟ ಕಣ್ಣು ಬಿಟ್ಟಂತೆ ಒಬ್ಬರ ಮುಖವನ್ನೊಬ್ಬರು ನೋಡ್ಕೋತ ನಿಂತ್ ಬಿಟ್ರು... ಅದನ್ನು ನೋಡಿದ ಬಳಿಕ ಯಾರೊಬ್ಬರಿಗೂ ೩ ದಿನ ಊಟ ಸೇರಲಿಲ್ಲಾ...
ಇಷ್ಟೆಲ್ಲಾ ವಿವರಗಳನ್ನು ನೀಡಿದ ಭಟ್ಟ, ಕೊನೆಗೆ ಹೇಳುದ್ದು ಕೇಳಿ ಕೆಲ ಕ್ಷಣ ನನಗೂ ಕೈಕಾಲು ಆಡದ ಹಾಗೆ ಆದವು. ಭಟ್ಟ ಹೇಳಿದ, "ಲೇ... ಅವತ್ತು ಏನಾದ್ರೂ ಹೈವೇನಲ್ಲಿ ಟ್ರಾಫಿಕ್ ಪೋಲೀಸ್ ನಮ್ಮನ್ನು ನಿಲ್ಲಿಸಿ ಕಿಟ್ ಬ್ಯಾಗ್ ಚೆಕ್ ಮಾಡಿದಿದ್ದರೆ, ನಮ್ಗೆ ಕಾಯಂ ಟಾಡಾ ಕೇಸಿನಲ್ಲಿ ೧೦ ವರ್ಷ ಜೈಲ್ ಆಗುತಿತ್ತಲೇ... ಪುಣ್ಯ, ಹೇಗೋ ಆ ಕಿಟ್ ಬ್ಯಾಗು ಯಾರ್ ಕೈಗೂ ಸಿಕ್ಕಲಿಲ್ಲ..." ಎಂದು ನಿಟ್ಟುಸಿರು ಬಿಟ್ಟ. ಅವನು ಹೇಳಿದನ್ನು ಕೇಳಿದ ಬಳಿಕ ನಾನೂ ಸಹ ಒಪ್ಕೊಂಡೆ, ಅದು ನಿಜವಾಗ್ಲೂ ಒಂದು ಕರಾಳ ರಾತ್ರಿಯೇ ಸರಿ ಅಂತ!
7 ಕಾಮೆಂಟ್ಗಳು:
ಈಗ ಆ ಬ್ಯಾಗ್ ಏನ್ ಮಾಡಿದಿರಾ? ಎಲ್ಲಿದೆ?
ಈ ವಿಶ್ಯ ಪೋಲೀಸ್ ನವ್ರಿಗೆ ಗೊತ್ತಾಗಿ ಅವ್ರು ನಿಮ್ಮನ್ನ ಹಿಡಿಯೋಕೆ ಬಂದ್ರೆ ಏನ್ ಮಾಡ್ತೀರಾ? :)
ನಿಮ್ಮಜ್ಜನ ಕಥೆ ಎಲ್ಲಾ ಅವರು ನಂಬೋಲ್ಲ. :-)
@ವಿಕಾಸ್ ಹೆಗಡೆ,
ಭಟ್ಟನ ಅದರ ವಿಚಾರವಾಗಿ ಏನನ್ನೂ ಬಾಯಿ ಬಿಡಲಿಲ್ಲಾ! ಆದರೆ ಅವರು ಅದನ್ನು ಎಲ್ಲಿಯಾದರೂ ಸೇಫಾಗಿ ಇಟ್ಟಿ ಬಂದ್ದಿದ್ದರಾ ಅಂತ ನನಗೂ ಕುತೂಹಲ!!
ಮಸ್ತ್ ಉಪ್ಪು ಖಾರ ಹಚ್ಚಿದೀರಿ ಬಿಡ್ರೀ ಸರ....
ಆ ಬ್ಯಾಗ್ನಲ್ಲಿ ಏನ್ನಿತ್ತು ಅಂತದ್ದು???
HI,
The story is Beautiful,
But, You have not told what was there in kit......
wat was in that bag... ?? 3 dina oota maadilla anta helide alva.... yenu aadaru manushayana tale burude itta.. or drugs itta??? please reveal the secret...
@ Everyone,
Aaitrappa. Naanu helidella full bundluu. Swalpa maja togondu nimigu swalpa maja kodona anta ashte!
ಕಾಮೆಂಟ್ ಪೋಸ್ಟ್ ಮಾಡಿ