ಸೋಮವಾರ 12 ಮಾರ್ಚ್ 2012

ಆಶಯ

ಜೀವನವೆಂಬ ನಾಟಕದಲ್ಲಿ
ನೀವು ನಟಿಸಿದ ಪಾತ್ರಗಳೆಷ್ಟೋ
ಪಾತ್ರದ ಭಾವನೆಗಳೆಷ್ಟೋ -
ಒಮ್ಮೆ ಅಳು, ಒಮ್ಮೆ ನಗು.
ಒಮ್ಮೆ ದುಃಖ, ಒಮ್ಮೆ ಸುಖ

ಜೀವನವೆಂಬ ನಾಟಕದಲ್ಲಿ
ನೀವು ನಟಿಸಬೇಕಾಗಿರುವ ಪಾತ್ರಗಳೆಷ್ಟೋ
ಪಾತ್ರದ ನಿರೀಕ್ಷೆಗಳೆಷ್ಟೋ -
ತುಂಬು ಪ್ರೀತಿ, ಸದಾ ನೆಮ್ಮದಿ.
ಗಟ್ಟಿ ನೆಲೆ, ಆಶಯದ ಸೆಲೆ

ಪಾತ್ರದ ಆಯ್ಕೆ ಸೂತ್ರದಾರನದ್ದು
ನಟಿಸುವ ಸಾಮರ್ಥ್ಯ ಮಾತ್ರ ನಿಮ್ಮದು
ಪಾತ್ರ ಯಾವುದೇ ಇರಲಿ
ರಂಗ ಯಾವುದೇ ಇರಲಿ
ನಿಮ್ಮ ಸಾಮರ್ಥ್ಯ ಎಂದೂ ಕುಗ್ಗದಿರಲಿ
ಯಶಸ್ಸಿನ ಗರಿ ಸದಾ ನಿಮ್ಮೊಂದಿಗಿರಲಿ

ಮಂಗಳವಾರ 14 ಫೆಬ್ರವರೀ 2012

ಪ್ರೊಪೋಸ್ ಮಾಡದಿರಲು ೧೨ ಕಾರಣಗಳು!

ಇಂದು ಫೆಬ್ರುವರಿ ೧೪. ಸೋ ಕಾಲ್ಡ್ ವ್ಯಾಲೆಂಟೈನ್ಸ್ ಡೇ; ಅಥವಾ ಪ್ರೇಮಿಗಳ ದಿನಾಚರಣೆ. ಅದು ಭಾರತೀಯರಲ್ಲಿ ಎಷ್ಟು ಪ್ರಸ್ತುತ, ಏಕೆ ಪ್ರಸ್ತುತ ಎಂಬ ವಾದಗಳನ್ನೆಲ್ಲ ಬದಿಗಿಡೋಣ.

ಪ್ರೀತಿಸಲು ನೂರಾರು ಕಾರಣಗಳಿರಬಹುದು. ಆದರೆ ಹುಡುಗ ಅಥವಾ ಹುಡುಗಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಒಂದೇ ಕಾರಣವಿರಲು ಸಾಧ್ಯ. ಹೃದಯದ ಕರೆಗೆ ಓಗೊಟ್ಟು ಅವನನ್ನು ಅಥವಾ ಅವಳನ್ನು ಇಷ್ಟ ಪಟ್ಟಿದ್ದು.

ಆದರೆ ಎಷ್ಟೋ ಪ್ರೇಮಿಗಳು ತಮ್ಮ ಪ್ರೀತಿಯನ್ನು ತಮ್ಮ ಪ್ರಿಯತಮ/ಪ್ರಿಯತಮೆಯೊಂದಿಗೆ ಹೇಳಿಕೊಳ್ಳಲಾಗದೆ ಮರುಗುತ್ತಾರೆ. ಅದಕ್ಕೆ ಕಾರಣಗೇಳಿನರಬಹುದು? ಯೋಚಿಸಿದ್ದೀರಾ? ಪ್ರೊಪೋಸ್ ಮಾಡದೇ ಇರಲು ನನಗನ್ನಿಸಿದ ಕೆಲವು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ:

೧. ನಾನು ಅವನಿಗೆ/ಅವಳಿಗೆ ಇಷ್ಟ ಆಗುತ್ತೇನೋ ಇಲ್ಲವೋ ಎಂಬ ಗೊಂದಲ.
೨. ನಾನೇ ಯಾಕೆ ಪ್ರೊಪೋಸ್ ಮಾಡ್ಲಿ, ಆಕೆಗೆ/ಅವನಿಗೆ ಇಷ್ಟ ಇದ್ರೆ ಅವಳೇ/ಅವನೇ ಮಾಡಲಿ ಎಂಬ ಭಾವನೆ.
೩. ಹುಡುಗ/ಹುಡುಗಿ ಒಪ್ಪಿಕೊಳ್ಳದೇ ಇದ್ರೆ ಅವಮಾನ ಎನ್ನುವ ಭಾವನೆ.
೪. ಒಂದೊಮ್ಮೆ ಒಪ್ಪದಿದ್ದರೆ ಇರುವ ಸ್ನೇಹವೂ ಹಾಳಾಗಬಹುದು ಎಂಬ ಭಯ.
೫. ತಾನು ನಿಜವಾಗಿಯೂ ಪ್ರೀತಿಯಲ್ಲಿ ಇದೀನೋ ಇಲ್ವೋ ಅನ್ನೋದೇ ಗೊತ್ತಾಗದೇ ಇರೋ ಭಾವನೆ.
೬. ನಿಜವಾದ ಪ್ರೀತಿ ಇದ್ದರೂ ಮನೆಯಲ್ಲಿ ಲವ್ ಎಂದರೆ ಏನೆಂದುಕೊಳ್ಳುತಾರೋ ಎಂಬ ಭಾವನೆ.
೭. ಒಂದು ವೇಳೆ ಪ್ರೇಮವಿವಾಹಕ್ಕೆ ಒಪ್ಪುವ ಕುಟುಂಬವೇ ಆದರೂ, ಮನೆಯವಲ್ಲಿನ ಇತರರಿಗೆ ಹುಡುಗ/ಹುಡುಗಿ ಹೊಂದಾಣಿಕೆ ಆಗದಿದ್ದರೆ ಏನು ಗತಿ ಎಂಬ ಗೊಂದಲ.
೮. ಹುಡುಗ/ಹುಡುಗಿಯೂ ಅದಕ್ಕೆ ಒಪ್ಪಿ ಮದುವೆಯೂ ಆದರೂ, ಜಾತಕ ಕೂಡಿ ಬರದೆ ಮುಂದೆ ವೈವಾಹಿಕ ಜೀವನದಲ್ಲೇನಾದರೂ ವಿರಸವುಂಟಾಗಿ, ಮುಂದೆ ಹಿರಿಯರು ಆಡಿಕೊಳ್ಳುವಂತಾದರೆ ಎಂಬ ಭಯ.
೯. ಈಗಾಗಲೇ ಆ ಹುಡುಗ/ಹುಡುಗಿ ಬೇರೆ ಯಾರನ್ನೋ ಇಷ್ಟಪಟ್ಟಿದ್ದರೆ ಏನು ಗತಿ ಎಂಬ ಸಂಶಯ.
೧೦. ಹುಡುಗಿಯ ಸೋದರ/ಸಂಬಂಧಿಗಳಾರಾದರೂ ಗೂಂಡಾಗಳ ಥರ ಇದ್ದರೆ, ಅಥವಾ ಕುಟುಂಬಗಳ ಮಧ್ಯೆ ಪಾರಂಪರಿಕ ದ್ವೇಷ ಇದ್ದರೆ, ಪರಸ್ಪರ ಇಷ್ಟ ಪಟ್ಟಿದ್ದರೂ ಅದನ್ನು ಹೇಳಿಕೊಳ್ಳಲು ಹುಡುಗ-ಹುಡುಗಿ ಇಬ್ಬರಿಗೂ ಆಕೆಯ ಸೋದರ/ಸಂಬಂಧಿಯ ಅಥವಾ ಅವರ ಕುಟುಂಬದ ಬಗ್ಗೆ ಇರುವ ಭಯ.
೧೧. ಹುಡುಗ/ಹುಡುಗಿಯ ಆಸ್ತಿ-ಅಂತಸ್ತಿನಲ್ಲಿ ಅಜಗಜಾಂತರ ವ್ಯತ್ಯಾಸ ಇದ್ದು, ಅವನಿಗೆ/ಅವಳಿಗೆ ತಾನು ಸರಿಸಾಟಿ ಹೌದೋ ಅಲ್ಲವೋ ಎಂಬ ಅನಿಸಿಕೆಯಿಂದ ಉಂಟಾಗುವ ಕೈಗೆ ಸಿಗದ ದ್ರಾಕ್ಷಿ ಹುಳಿ ಎಂಬ ಭಾವನೆ.
೧೨. ಹುಡುಗ/ಹುಡುಗಿಯ ವಿದ್ಯಾರ್ಹತೆಯಲ್ಲಿ ವ್ಯತ್ಯಾಸ (ಹುಡುಗಿ ಅತಿ ಕಡಿಮೆ ಓದಿರುವುದು ಅಥವಾ ಹುಡುಗನಿಗಿಂತ ಹೆಚ್ಚು ಓದಿರುವುದು) ಇದ್ದು, ತನಗೂ ಆತನಿಗೂ/ಆಕೆಗೂ ಹೊಂದಾಣಿಕೆಯಾಗುತ್ತದೆಯೋ ಇಲ್ಲವೋ ಎಂಬ ಸಂಶಯ.

ಇವುಗಳ ಹೊರತಾಗಿ ಬೇರೆ ಕಾರಣಗಳೂ ನಿಮಗೆ ಹೊಳೆಯಬಹುದು ಅಥವಾ ಅನುಭವಕ್ಕೆ ಬಂದಿರಬಹುದು. ಅದನ್ನು ನೀವು ಮುಕ್ತವಾಗಿ ಹಂಚಿಕೊಳ್ಳಬಹುದು.

ಸೋಮವಾರ 30 ಜನವರೀ 2012

ಸ್ನೇಹ ಬಂಧ



ಮೌನಿಯಾದಾಗ
ಮಾತಾಗಿತ್ತು
ಒಂಟಿಯಾದಾಗ
ಜೊತೆಗಾರನಾಗಿತ್ತು
ದುಗುಡಗೊಂಡಾಗ
ಶಾಂತಗೊಳಿಸಿತ್ತು
ಆತುರಬಿದ್ದಾಗ
ತಡೆಹಿಡಿದಿತ್ತು
ಕೆಳಗೆ ಬಿದ್ದಾಗ
ಏಣಿಯಾಗಿತ್ತು
ಮೇಲೇರಿದಾಗ
ಬೆನ್ನು ತಟ್ಟಿತ್ತು
ಪ್ರತಿ ಕ್ಲಿಷ್ಟತೆಯಲೂ
ಜೊತೆಯಾಗಿತ್ತು
ಯಾರದೋ ವಕ್ರದೃಷ್ಟಿಗೆ
ಬಲಿಯಾಗಿತ್ತು
ನಿನ್ನ ನನ್ನಿಂದ ಮಾಡಿ ದೂರ
`ಸ್ನೇಹ ಬಂಧ ` ಕಳಚಿತ್ತು.

ಸೋಮವಾರ 2 ಜನವರೀ 2012

ಜೀವನ ರೇಖೆ

ಹಲವು ರೇಖೆಗಳನು ಗೀಚಿ
                 ಮರಳಿ ಅಳಿಸಿ ಹಾಕಿದೆ,
ಹಲವು ಕನಸುಗಳನು ಕಂಡು
                 ನನಸ ಮರೆತು ಜಾರಿದೇ ||

ಮೊದಲ ಮಾತು ಮೊದಲ ಕನಸು
                 ಮನದಲಿನ್ನು ಉಳಿಯಿತೇ,
ಅದಕೆ ಏನೋ ಇಂದು ಮನವು
                 ನಿನ್ನ ಕಡೆಯೇ ಜಾರಿದೇ||

ನಲಿವ ಹಾದಿಯಲ್ಲಿ ನಾನು
                ನಗದೆ ಹೋದೆನಲ್ಲವೇ,
ನಿನ್ನ ಪ್ರೀತಿಯಲ್ಲಿ ನಾನು
                ಕರಗಿ ಹೋದೆನಲ್ಲವೇ||

ನಲ್ಲೆ ನಿನ್ನ ಕೊರಗು ಎನಗೆ
                 ಕನಸಿನಲ್ಲೂ ಕಾಡಿತು,
ಅದಕೆ ಏನೋ ಇಂದು ನಲಿವ
                 ನನಸನೊಂದು ನೀಡಿದೇ||

ನಲ್ಲೆ ಏಕೋ ಇಂದು ಮನವು ನಿನ್ನ ಕಡೆಯೇ ಜಾರಿದೇ..
                 

ಮಂಗಳವಾರ 27 ಸಪ್ಟೆಂಬರ್ 2011

ಬಾರೆನ್ನ ನಲ್ಲೆ

ತಿಂಗಳಿನ ಬೆಳಕಿನಲಿ ಮಧುಮಾಸ ರಾತ್ರಿಯಲಿ
ತಂಗಾಳಿ ಬೀಸಿಹುದು ನನ್ನ ನಲ್ಲೆ
ಅಂಗಾಂಗದೊಳಗೆಲ್ಲ ಅವಿತಿರುವ ಬಯಕೆಗಳು
ಕಂಗಳಲಿ ತೋರುತಿವೆ ನನ್ನ ನಲ್ಲೆ

ಹಾವಭಾವದಿ ಮೆರೆದು ಕುಡಿನೋಟದಲ್ಲೆನ್ನ
ತಿವಿಯದಿರು ನೀನೀಗ ಕಣ್ಣಿನಲ್ಲೆ
ತಾವರೆಯ ಮೊಗವನ್ನು ಈಗ ತಾನೇ ನೋಡಿ
ಸಾವರಿಸಿಕೊಂಡಿಹೆನು ನನ್ನ ನಲ್ಲೆ

ಸಲ್ಲಾಪ ಸರಸಗಳ ಮಳೆ ಹನಿಯು ಉದುರಿಹುದು
ಮೆಲ್ಲ ಮೆಲ್ಲನೆ ನಿನ್ನ ಮಾತಿನಲ್ಲೆ
ಮಲ್ಲಿಗೆಯ ಕಂಪಿನೊಳು ಮೈ ಮರೆತು ನಿನ್ನನ್ನು
ಪಲ್ಲಂಗ ಕಾದಿಹುದು ನನ್ನ ನಲ್ಲೆ

ಸ್ಫೂರ್ತಿ: ಈಶ್ವರ ಕಿರಣ್ ಭಟ್ ಅವರ "ಏಳೆನ್ನ ನಲ್ಲೆ" ಎಂಬ ಕವನ