ಬುಧವಾರ, ಡಿಸೆಂಬರ್ 29, 2010

ನಿನ್ನೆ

ಏನೋ ಒಂದು ಆತಂಕ. ಕುಳಿತಲ್ಲೇ ಕೈ ಬೆವರುತ್ತಿದೆ. ಸುತ್ತ ಮುತ್ತ ಇರುವವರೆಲ್ಲಾ ಗಡಿಬಿಡಿಯಲ್ಲಿ ತಮ್ಮ ಚೀಲದಿಂದ ಹೋಂವರ್ಕ್ ಪುಸ್ತಕ ಹೊರ ತೆರೆಯುತ್ತಿದ್ದರೆ ನಾನು ಹೆಸರನ್ನುಳಿದು ಮತ್ತೇನನ್ನೂ ಬರೆದಿರದ ಪುಸ್ತಕವನ್ನು ಕೈನಲ್ಲಿ ಹಿಡಿದು ಕುಳಿತ್ತಿದ್ದೆ. ಹೋಂವರ್ಕ್ ಮಾಡಿಲ್ಲ...

ಮಿಸ್ ಎಲ್ಲರಿಗೂ ತಮ್ಮ ಪುಸ್ತಕವನ್ನು ಅವರ ಮೇಜಿನ ಮೇಲೆ ಇಡಲು ಹೇಳುತ್ತಿದ್ದಾಗ ನನ್ನ ಹೋಂವರ್ಕ್ ಪುಸ್ತಕದ ಗರಿಗರಿ ಹಾಳೆಗಳ ವಾಸನೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು. ಒಬ್ಬೊಬ್ಬರಾಗಿ ಪುಸ್ತಕ ಇಟ್ಟು ಹಾಜರಿ ಹಾಕಿಸಿ ಬರುತ್ತಿದ್ದಾರೆ. ನನ್ನ ಪಕ್ಕದವ ಈಗಷ್ಟೇ ಎದ್ದು ಹೋದ, ಮುಂದಿನವ ನಾನೇ... ಕೈ ನಡುಗುತ್ತಿವೆ. ಗಂಟಲು ಒಣಗಿ ಬಹಳ ಹೊತ್ತಾಗಿದೆ. ಕಣ್ಣು ನೀರ ಹನಿಯಿಂದ ಮಂಜಾಗುತ್ತಿದೆ. ನನ್ನ ಸರದಿ...

ನಿನ್ನಿಂದಲೇ... ನಿನ್ನಿಂದಲೇ..

ಹುಲಿಯ ಮುಂದೆ ನಿಂತ ಹರಿಣದ ಮನಕ್ಕೆ ಆಹ್ಲಾದಕರವಾದ ಎಲ್ಲಿಂದಲೋ ತೇಲಿ ಬಂದ ಸಂಗೀತ ಸಾಂತ್ವನದ ಸಿಂಚನ ಮಾಡಿತ್ತು. ಹಾಡಿನಲ್ಲಿ ಮೈರೆಯಬೇಕೆನ್ನುವಷ್ಟರಲ್ಲಿ ಗಾಢ ಮೌನ.

"ನೇಕ್ಸ್ಟ್..."

ಮಿಸ್‌ನ ಗಟ್ಟಿಯಾದ ದ್ವನಿ ನನ್ನನ್ನು ಅಷ್ಟೇ ಗಟ್ಟಿಯಾಗಿ ನಡುಗಿಸಿಬಿಟ್ಟಿತು. ನನ್ನ ಖಾಲಿಪುಸ್ತಕ ಹಿಡಿದು ನಿಧಾನವಾಗಿ ಅವರೆಡೆಗೆ ಹೊರಟೆ. ನನ್ನ ಎದೆಯ ಬಡಿತ ಜೋರಾಗುತ್ತಿದೆ. ನಾಲಿಗೆ ಒಣಗುತ್ತಿದೆ. ಏನೆಂದು ಹೇಳಲಿ? ಹತ್ತು ಹಲವು ಕಾಲ್ಪನಿಕ ಕಾರಣಗಳನ್ನು ಮನ್ನಸ್ಸು ಯೋಚಿಸುತ್ತಿತ್ತು.

ನಿನ್ನಿಂದಲೇ... ನಿನ್ನಿಂದಲೇ...

ಅರೇ, ಈ ಹಾಡನ್ನು ಎಲ್ಲೋ ಕೇಳಿದ್ದೀನಲ್ಲಾ!

ನನ್ನ ಖಾಲಿ ಪುಸ್ತಕವನ್ನು ಅವರ ಮೇಜಿನ ಮೇಲಿಟ್ಟೆ. ಅಂದಿನ ಹೋಂವರ್ಕ್ ಇರುವ ಪುಟವನ್ನು ಎಲ್ಲರೂ ತೆರೆದಿಟ್ಟಿದ್ದರು. ಮಿಸ್ ನನ್ನನ್ನೇ ನೋಡುತ್ತಿದ್ದರೆ ನಾನು ಅವರ ಕೈನಲ್ಲಿರುವ ಬೆತ್ತದತ್ತ ನೋಡಿ ಏನೂ ಮಾಡಲೂ ತೋಚದೆ ನಿಂತುಬಿಟ್ಟಿದ್ದೇನೆ.

ಜ್ವರ ಬಂದಿತ್ತು ಅಂತ ಹೇಳಲಾ, ಪುಸ್ತಕ ಕಳೆದು ಹೋಗಿತ್ತು ಆದ್ದರಿಂದ ಇಂದು ಹೊಸ ಪುಸ್ತಕ ಇಟ್ಟಿದ್ದೇನೆಂದು ಹೇಳಲಾ ಅಥವಾ ತೆರೆದಿರುವ ತರಗತಿಯ ಬಾಗಿಲಿನಿಂದ ಓಡಿಹೋಗಲಾ? ಊಹೂಂ, ಯಾವುದಕ್ಕೂ ಧೈರ್ಯ ಸಾಲುತ್ತಿಲ್ಲ. ಬೆತ್ತದೇಟು ಬೀಳುವುದು ಕಾಯಂ...

ನಿನ್ನಿಂದಲೇ... ನಿನ್ನಿಂದಲೇ...

ಅರೇ ಇದು ನನ್ನ ಮೊಬೈಲ್‌ನ ಅಲಾರಂ ಟ್ಯೂನ್. ನಾನು ಕನಸು ಕಾಣುತ್ತಿದ್ದೇನೆಯೇ? ಹೌದು ನಾನು ಶಾಲಾ ಮಟ್ಟವನ್ನು ಮೀರಿ ಇಂಜಿನೀರಿಂಗ್ ಮುಗಿಸಿ ಬಹಳ ವರ್ಷಗಳೇ ಆಯ್ತಲ್ಲಾ!

ಎಲ್ಲಿಂದಲೋ ಕಳಚಿಬಿದ್ದ ಅನುಭವ. ತನ್ನಪಾಡಿಗೆ ಹಾಡಿಕೊಳ್ಳುತ್ತಿದ್ದ ಮೊಬೈಲನ್ನು ಮಲಗಿಸಿ ಮತ್ತೆ ಹೊದಿಕೆ ಎಳೆದುಕೊಂಡು ಮಲಗಿದೆ. ನಿದ್ರೆ ಹತ್ತಲಿಲ್ಲ. ಏನನ್ನೋ ಕಳೆದುಕೊಂಡ ಬೇಸರ. ನೂರು ಬೆತ್ತದೇಟು ಬಿದ್ದರೂ ಸರಿ, ಕಳೆದು ಹೋದ ಆ ದಿನಗಳೊಳಗೆ ಧುಮುಕಬೇಕೆನ್ನುವ ಹಂಬಲ. ಬೆತ್ತದೇಟಿಗೆ ಹೆದರಿ ಬಿಗಿ ಹಿಡಿದಿದ್ದ ಮುಷ್ಟಿಯನ್ನು ನಿಧಾನವಾಗಿ ಸಡಿಲಿಸಿದೆ...

11 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

Chennagide. ishtavAyitu.

ತೇಜಸ್ವಿನಿ ಹೆಗಡೆ ಹೇಳಿದರು...

ತುಂಬಾ ಚೆನ್ನಾಗಿದೆ. ನನಗೂ ಇಂತಹ ಸ್ಕೂಲ್, ಕಾಲೇಜಿನ ಕನಸುಗಳು ಬಿದ್ದು ಕಾಡುತ್ತಲೇ ಇರುತ್ತವೆ. ಅಂದಿನ ದಿನಗಳ ಅನುಭೂತಿಗಾಗಿ ಛಡಿಯೇಟೇನು ಮಹಾ! :)

ಸೋಮಶೇಖರ ಹುಲ್ಮನಿ ಹೇಳಿದರು...

ತೇಜು,
ಬಾಲ್ಯದ ಆ ನೆನಪುಗಳು ನನ್ನನ್ನು ಎಸ್ಟೋ ಬಾರಿ ಕಾಡಿದ್ದಿದೆ ,
ಯಾವ ಹಮ್ಮು ಬಿಮ್ಮು ಗಳಿಲ್ಲದ ಆ ಜೀವನ ವ್ಹಾ !
ನಾನು ಏಟು ತಿಂದ ಕ್ಷಣ ಗಳನ್ನು ಆಗಾಗ ಮೆಲಕು ಹಾಕುತ್ತಿರುತ್ತ್ತೇನೆ
ಈಗ ಮತ್ತೊಮ್ಮೆ ಆ ಅವಕಾಶ ನಿನ್ನ ಲೇಖನದಿಂದ !....
ಬಾರ್ ಬಾರ್ ಆತಿ ಹಾಯ್ ಮುಜ್ಕೋ ಮಧುರ ಯಾದ ಬಚಪನ್ ತೆರಿ ........

ಶಿವಪ್ರಕಾಶ್ ಹೇಳಿದರು...

ಹ್ಹ ಹ್ಹ ಹ್ಹ...
ನನಗೂ ಕೂಡ ಇಂಜಿನಿಯರಿಂಗ್ ನ internals exams ಕನಸಲ್ಲಿ ಬಂದು ಹೆದರಿಸ್ತವೆ....!!

ಸುಧೇಶ್ ಶೆಟ್ಟಿ ಹೇಳಿದರು...

Ha ha ha....

kuthoohala huttisuvanthe baredha reethi ishta aaythu :)

chennagidhe..

ಮನಸ್ವಿ ಹೇಳಿದರು...

ತೇಜು.. ವಾಹ್... ಒಂದೇ ಉಸರಿನಲ್ಲಿ ಓದಿ ಮುಗಿಸಿದೆ, ಅಷ್ಟು ಬೇಗನೆ ಓದಿಸಿಕೊಂಡು ಹೋಯಿತು... ಬಾಲ್ಯ ಅಂದರೆ ಹಾಗೇನೆ, ಆವಾಗಾವಾಗ ಅದರ ಮಧುರ ನೆನಪುಗಳು ಕಾಡುತ್ತಿರುತ್ತವೆ, ನಾವು ಚಿಕ್ಕವರಾಗೇ ಇದ್ದಿದ್ದರೆ ಅನ್ನಿಸಿಬಿಡುತ್ತೆ.. ಹೊಸ ವರ್ಷದ ಮೊದಲನೇ ದಿನವೇ ಇಂತಹದ್ದೊಂದು ಬರಹ ಓದಲು ಸಿಕ್ಕಿದ್ದು ಖುಶಿ ಕೊಟ್ಟಿತು.. ಹೀಗೆ ಒಳ್ಳೋಳ್ಳೆ ಲೇಖನಗಳನ್ನು ಬರೆಯುತ್ತಿರು, ಹೊಸ ವರುಷದ ಹಾರ್ಧಿಕ ಶುಭಾಶಯಗಳು.

ತೇಜಸ್ ಜೈನ್ Tejas jain ಹೇಳಿದರು...

ಧನ್ಯವಾದಗಳು ವಿಕಾಸ್, ಮತ್ತೆ ಬರುತ್ತಿರಿ..

ನಿಮ್ಮ ಮಾತು ಅಕ್ಷರಶಃ ನಿಜ ತೇಜಸ್ವಿನಿಯವರೇ. ಅಂದಿನ ದಿನಗಳ ಅನುಭವಗಳನ್ನು ನೆನೆಯುವುದೇ ಒಂದು ಆನಂದ. ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.

ಸೋಮ, ಹಮ್ಮು ಬಿಮ್ಮುಗಳಿಲ್ಲದ ಜೀವನದಿಂದ ನಾವು ಬಹಳ ದೂರ ಸಾಗಿಬಿಟ್ಟಿದ್ದೇವೆ. ಇಂದಿನ ಸಮಯವನ್ನು ಮುಂದೆ ಬೇಸರಿಸದ ರೀತಿ ಬದುಕಬೇಕಷ್ಟೇ...

ಶಿವಪ್ರಕಾಶರೇ, ತಿಂಗಳು ಪೂರ್ತಿ ತಲೆಯೊಳಗೆ ಇಳಿಯದ ವಿಷಯಗಳು ಇಂಟರ್ನಲ್ಸಿನ ಹಿಂದಿನ ರಾತ್ರಿ ತಲೆಗೆ ಹತ್ತುವ ರಹಸ್ಯ ಇಂದಿಗೂ ನನಗೆ ಅರ್ಥವಾಗಿಲ್ಲ :)

ಸುಧೇಶರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸ್ವಿ, ಬಾಲ್ಯದ ನೆನಪೇ ಹಾಗೆ. ನೆನೆದಾಗಲೆಲ್ಲಾ ಮತ್ತೆ ಆ ಕ್ಷಣಗಳನ್ನು ಬದುಕಬೇಕೆನಿಸಿ ಬಿಡುತ್ತದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ವಿದ್ಯಾ ರಮೇಶ್ ಹೇಳಿದರು...

ನಿಜ, ಇಂಥ ಕನಸುಗಳನ್ನು ನಾನೂ ಎಷ್ಟೋ ಸಲ ಕಂಡಿದ್ದೇನೆ. ಕೆಲವೊಂದು ಬೆಚ್ಚಿ ಬೀಳಿಸುತ್ತವೆ, ಅದರೂ ಕಾಣಬೇಕೆಂಬ ಕನಸುಗಳು ಚೆನ್ನಾಗಿದೆ :)

ಮನಮುಕ್ತಾ ಹೇಳಿದರು...

ಬಾಲ್ಯದ ನೆನಪುಗಳು ಎಷ್ಟೊ೦ದು ಸಿಹಿ ಅಲ್ಲವೆ? ಬಾಲ್ಯದಲ್ಲಿ ಇದ್ದ೦ತಹ ನಿಜವಾದ ಸಿಹಿ, ಸ೦ತೋಷಗಳು ಅರ್ಥವಾಗುವುದು ನಾವು ದೊಡ್ಡವರಾದ ಬಳಿಕ!
ನಿಮ್ಮ ಬರಹ ಚೆನ್ನಾಗಿದೆ.ಒಮ್ಮೆ ಬಾಲ್ಯದ ನೆನಪು ಮರುಕಳಿಸಿತು.

ತೇಜಸ್ ಜೈನ್ Tejas jain ಹೇಳಿದರು...

ವಿಧ್ಯಾರವರೇ, ನಿಜ, ಬೆಚ್ಚಿ ಬೀಳಿಸುವ ಸುಂದರ ಕನಸುಗಳು... ಪ್ರತಿಕ್ರಿಯೆಗೆ ಧನ್ಯವಾದಗಳು...

ಮನಮುಕ್ತಾರವರೇ, ಜೀವನವೇ ಹಾಗಲ್ಲವೇ? ಅಡಿಗರ ಮಾತುಗಳಲ್ಲಿ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ.... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Charan ಹೇಳಿದರು...

ತುಂಬ ಚೆನ್ನಾಗಿದೆ . ಬಾಲ್ಯದ ಸವಿ ನೆನಪುಗಳು ಕಣ್ಣ ಮುಂದೆ ಬಂದಂತಾಯಿತು. ತುಂಬ ಧನ್ಯವಾದಗಳು .