ಶುಕ್ರವಾರ, ಅಕ್ಟೋಬರ್ 17, 2008

ಮನಸ್ಸಿದ್ದರೆ ಮಾರ್ಗ

ವಿಶ್ವವೇ ಕಾತರದಿಂದ ಆತನತ್ತ ನೋಡುತ್ತಿದೆ. ಆತನ ಒಂದು, ಒಂದೇ ಒಂದು, ಕಾರ್ಯ ಆತನನ್ನು ಅದ್ಭುತ ಹೀರೋ ಆಗಿಸಬಲ್ಲುದು. ಕೊಂಚ ಎಚ್ಚರ ತಪ್ಪಿದರೂ ಸಾಕು, ಸ್ವಲ್ಪ ಗುರಿ ತಪ್ಪಿದರೂ ಸಾಕು, ಆತನ ವೈಫಲ್ಯ ಪೂರ್ತಿ ದೇಶದ ಮಾನ ತೆಗೆಯಬಲ್ಲುದು. ಜಗತ್ತಿಗೆ ಆತ ಒಬ್ಬ ಫ್ಲಾಪ್ ವ್ಯಕ್ತಿ ಎಂದೆನಿಸಿಬಿಡುತ್ತಾನೆ. ಅಷ್ಟೇ ಅಲ್ಲ, ಇಡೀ ಕೂಟಕ್ಕೇ ಕಪ್ಪು ಚುಕ್ಕಿಯಾಗಿ ಉಳಿದುಬಿಡುತ್ತದೆ... ಆತನಿಗೂ ಅದರ ಅರಿವಿದೆ. ಆತ ಹಿಂಜರಿಯಲಿಲ್ಲ, ಕಂಗೆಡಲಿಲ್ಲ. "ಧೈರ್ಯಂ ಸರ್ವತ್ರ ಸಾಧನಂ" ಎನ್ನುವುದನ್ನು ಅರಿತು, ಯಾವುದೇ ರೀತಿಯ ದುಗುಡಕ್ಕೆ ಒಳಗಾಗದೇ ತನ್ನ ಪಾಲಿಗೆ ಬಂದ ಕೆಲಸವನ್ನು ಶ್ರದ್ಧೆಯಿಂದ ಮಾಡಿದ. ಆತ ಗುರಿ ತಪ್ಪಲಿಲ್ಲ. ನೆರೆದಿದ್ದ ಸಾವಿರಾರು ಜನರ ನಿರೀಕ್ಷೆಯನ್ನು, ತನ್ನ ನಾಡಿನವರು ತನ್ನ ಮೇಲಿಟ್ಟ ಭರವಸೆಯನ್ನು, ಆತ ಹುಸಿ ಮಾಡಲಿಲ್ಲ. ಇಡೀ ಜಗತ್ತೇ ಆತನ ಸಾಧನೆಯನ್ನು ಕೊಂಡಾಡಿತು. ಆ ಕಾರ್ಯಕ್ರಮ "ನ ಭೂತೋ ನ ಭವಿಷ್ಯತಿ" ಎಂದೆನಿಸಿ ಇತಿಹಾಸದ ಸುವರ್ಣಾಕ್ಷರಗಳಲ್ಲಿ ದಾಖಲಾಯಿತು.

ನಾನು ಹೇಳುತ್ತಿರುವುದು ಯಾವುದರ ಬಗ್ಗೆ ಎಂದು ಈಗಾಗಲೇ ನಿಮಗೆ ಗೊತ್ತಾಗಿರಬಹುದು. ಅದು ೧೯೯೨ರ ಜುಲೈ ೨೫ರಂದು ಬಾರ್ಸಿಲೋನಾದಲ್ಲಿ ನಡೆದ ಓಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ. ಆಂಟೋನಿಯೋ ರೆಬೋಲ್ಲೋ ಎಂಬ ಪ್ಯಾರಾಲಿಂಪಿಕ್ ಬಿಲ್ಲುಗಾರ ತನಗೆ ನೀಡಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಆ ದಿನವನ್ನು ಅವಿಸ್ಮರಣೀಯವಾಗಿಸಿದ್ದ.

ಸ್ಪೇನ್ ಹೇಳಿ ಕೇಳಿ ಶೂರರ ನಾಡು. ಗೂಳಿಕಾಳಗ ಅಲ್ಲಿನ ರಾಷ್ಟ್ರೀಯ ಕ್ರೀಡೆ. ಅಂಥ ದೇಶದಲ್ಲಿ ಓಲಿಂಪಿಕ್ ಕ್ರೀಡೆ ಆಯೋಜಿಸಿದರೆ ಏನಾದರೂ ಥ್ರಿಲ್ ಇರುವುದು ಬೇಡವೇ? ಹಾಗಾಗಿ ಬಾಣದಿಂದ ಜ್ಯೋತಿ ಬೆಳಗಿಸುವ ಅಭೂತಪೂರ್ವ ಉಪಾಯಕ್ಕೆ ಸಮಾರಂಭದ ಹೊಣೆ ಹೊತ್ತಿದ್ದ ಸಮಿತಿ ಮಣೆ ಹಾಕಿತು. ಅಕಸ್ಮಾತ್ ಆ ಬಾಣವೇನಾದರೂ ಗುರಿ ತಪ್ಪಿದ್ದರೆ ಸ್ಪೇನಿಗೆ ಪ್ರಪಂಚದೆದುರು ಆಗುತ್ತಿದ್ದ ಅವಮಾನ ಅಷ್ಟಿಷ್ಟಲ್ಲ. ಇದನ್ನು ಸಮಿತಿ ಗಮನಿಸಲಿಲ್ಲವೆಂದೇನಲ್ಲ, ಕಷ್ಟಸಾಧ್ಯವಾದುದನ್ನು ಸಾಧಿಸುವ ಆತ್ಮವಿಶ್ವಾಸ ಅವರಲ್ಲಿತ್ತು, ಅಷ್ಟೆ.

೨೦೦ ಜನ ಬಿಲ್ಗಾರರನ್ನು ಇದಕ್ಕಾಗಿ ಆಯ್ಕೆ ಮಾಡಲಾಯಿತು. ಅವರಿಗೆ ಬೇರೆ ಬೇರೆ ಹವಾಮಾನಗಳಲ್ಲಿ, ಬೇರೆ ಬೇರೆ ಸಮಯದಲ್ಲಿ ತರಬೇತಿ ನೀಡಿ ಅಭ್ಯಾಸ ಮಾಡಿಸಲಾಯಿತು. ಗಾಳಿ ಹೆಚ್ಚಾಗಿರುವ ಸೂರ್ಯೋದಯದ ವೇಳೆಯಲ್ಲಿ ಸಹ ಅಭ್ಯಾಸ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ಕೃತಕವಾಗಿ ವಿವಿಧ ಹವಾಮಾನ ಪರಿಸ್ಥಿತಿ, ಗಾಳಿಯ ಚಲನೆ ಮುಂತಾದವನ್ನು ಸೃಷ್ಟಿಸಲು ಯಂತ್ರಗಳನ್ನು ಬಳಸಲಾಯಿತು. ಅಭ್ಯಾಸದ ತೀವ್ರತೆ ಎಷ್ಟಿತ್ತೆಂದರೆ ಅವರಿಗೆ ಬೆರಳುಗಳನ್ನು ಸುಡುತ್ತಿದ್ದ ಬಾಣಗಳನ್ನು ಕೊಟ್ಟು ಸಹ ತರಬೇತಿ ನೀಡಲಾಯಿತು. ಎಷ್ಟೇ ಆದರೂ ಜಗತ್ತಿನೆದುರು ತಲೆ ಎತ್ತಿ ನಿಲ್ಲುವ ಅಥವಾ ಬಗ್ಗಿಸಿ ನಿಲ್ಲುವ ಪ್ರಶ್ನೆಯಲ್ಲವೇ?

ಸಮಾರಂಭಕ್ಕಿಂತ ಸ್ವಲ್ಪ ಮುಂಚೆ ೪ ಜನರನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ಆದರೆ ಜ್ಯೋತಿ ಬೆಳಗುವ ಗೌರವ ಯಾರಿಗೆ ದಕ್ಕುತ್ತದೆ ಎಂಬುದನ್ನು ಗೌಪ್ಯವಾಗಿಡಲಾಗಿತ್ತು. ಜ್ಯೋತಿ ಬೆಳಗಿಸಲು ಕೇವಲ ೨ ಘಂಟೆ ಇರುವಾಗ ಆಂಟೋನಿಯೋ ಆಯ್ಕೆ ಆಗಿರುವ ವಿಷಯವನ್ನು ಅವರಿಗೆ ತಿಳಿಸಲಾಯಿತು.



ಮುಂದೆ ನಡೆದದ್ದು ನಮ್ಮ ಕಣ್ಣೆದುರಿಗೆ ಇದೆ. ಯಾವುದೇ ಕ್ರೀಡಾ ಸಮಾರಂಭವನ್ನು ತೆಗೆದುಕೊಂಡರೂ ಇಂಥದ್ದೊಂದನ್ನು ಮೀರಿಸಲು ಸಾಧ್ಯವಿಲ್ಲ ಎಂಬಂಥ ಘಟನೆ ನಡೆಯಿತು. ಪ್ರತೀಕ್ಷೆಯ ಉತ್ತುಂಗದಲ್ಲಿ ತುದಿಗಾಲಲ್ಲಿ ಕುಳಿತಿದ್ದ ಕ್ರೀಡಾಂಗಣದ ಪ್ರೇಕ್ಷಕರನ್ನು ಆವರಿಸಿದ್ದ ನೀರವತೆ ದೀಪ ಉರಿಯಲಾರಂಭಿಸಿದ ಕ್ಷಣಮಾತ್ರದಲ್ಲಿ ಹಷೋದ್ಗಾರವಾಗಿ ಮಾರ್ಪಟ್ಟಿತು.

ಇಷ್ಟೇ ಆಗಿದ್ದರೆ ಬರೆಯುವಂಥದ್ದು ಏನೂ ಇರುತ್ತಿರಲಿಲ್ಲವೇನೋ.. ಆದರೆ...

ಕೇವಲ ಎಂಟು ತಿಂಗಳಿದ್ದಾಗ ಆಂಟೋನಿಯೋಗೆ ಪೋಲಿಯೋ ಆಗಿತ್ತು. ಎರಡೂ ಕಾಲುಗಳಲ್ಲಿನ ಬಲ ಕುಂದಿತ್ತು. ಬಲಗಾಲು ಬಹುಪಾಲು ಸ್ವಾಧೀನ ಕಳೆದುಕೊಂಡಿತ್ತು. "ನನಗೆ ಸವಾಲೆನಿಸುವ ಕೆಲಸ ಮಾಡಬಯಸುತ್ತೇನೆ" ಎಂದು ಹೇಳುತ್ತಿದ್ದ ಅವನ ಕಾಲಿನಲ್ಲಿ ಬಲವಿಲ್ಲದಿದ್ದರೇನಾಯಿತು, ಕೈ ಮತ್ತು ನಿಖರ ಗುರಿ ಬೇಕಾದ ಬಿಲ್ವಿದ್ಯೆ ಒಲಿದಿತ್ತು.

antonio-rebollo
ಆಂಟೋನಿಯೋ ರೆಬೋಲ್ಲೋ

ಮುಂದೆ ಆಂಟೋನಿಯೋ ಅಂಗವಿಕಲರ ಕ್ರೀಡಾಕೂಟವಾದ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪೇನ್ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದ. ವಿಪರ್ಯಾಸವೆಂದರೆ ಎರಡು ಬಾರಿ (೧೯೮೪ ನ್ಯೂಯಾರ್ಕ್, ೧೯೯೨ ಬಾರ್ಸಿಲೋನಾ) ಬೆಳ್ಳಿ ಹಾಗೂ ಒಂದು ಬಾರಿ (೧೯೮೮, ಸಿಯೋಲ್) ಕಂಚು ಗೆದ್ದ ಆತ ಒಂದು ಬಾರಿಯೂ ಚಿನ್ನ ಗೆಲ್ಲಲಿಲ್ಲ. ಆದರೆ ಆತ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸಿದ್ದ. ಆಂಟೋನಿಯೋ ರೆಬೋಲ್ಲೋ ಹೆಸರನ್ನು ಜನ ಮರೆಯಬಹುದು. ಆದರೆ ಆತ ಬೆಳಗಿಸಿದ ಜ್ಯೋತಿ ಮಾತ್ರ ನೋಡಿದವರ ಮನದಂಗಳದಲ್ಲಿ ಅಚ್ಚಳಿಯದೆ ಇರುತ್ತದೆ. ಮನಸ್ಸಿದ್ದರೆ ಮಾರ್ಗ ಅಲ್ಲವೇ?

21 ಕಾಮೆಂಟ್‌ಗಳು:

ಅನಂತ ಹೇಳಿದರು...

ಅದ್ಭುತವಾಗಿದೆ... ನಿಜ, ಮನಸಿದ್ದರೆ ಮಾರ್ಗ..!

ಸಂದೀಪ್ ಕಾಮತ್ ಹೇಳಿದರು...

ತುಂಬಾ ಸಲ ನೋಡಿದ್ದೀನಿ ಏನಾದ್ರೂ ಸಮಸ್ಯೆ ಇರೋರೆ ಸಾಧನೆ ಮಾಡೋದು :) ನಾವೆಲ್ಲಾ ವೇಸ್ಟ್ ಬಾಡಿಗಳು :(

Lakshmi Shashidhar Chaitanya ಹೇಳಿದರು...

ಅತ್ಯದ್ಭುತ ಸಾಧಕನ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಊನವನ್ನು ಊನವೆಂದು ಭಾವಿಸದೇ, ಅದಕ್ಕೂ ಮೀರಿದ ಆತ್ಮಸ್ಥೈರ್ಯ ಬೆಳೆಸಿಕೊಂಡರೆ,ಅಂಥವರಿಗೂ ಜೀವನವಿದೆ ಎಂಬುದನ್ನು ಸಾಧಿಸಿ ತೋರಿಸುವ ಇಂಥವರೇ ನಮಗೆ ಸ್ಫೂರ್ತಿಯ ಸೆಲೆಗಳು ಎಂದು ಅಭಿಪ್ರಾಯಪಡುತ್ತೇನೆ.

Harisha - ಹರೀಶ ಹೇಳಿದರು...

ಅನಂತ, ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಮೊಬೈಲ್ ವಿರಸ ಕೊನೆಗೊಂಡಿತೋ ಅಥವಾ ಇನ್ನೂ ಮುಂದುವರೆದಿದೆಯೋ? :-)

ಸಂದೀಪ್, ಹಾಗೇನಿಲ್ಲ. ಎಲ್ಲಾ ಸರೀ ಇರೋರೂ ಏನಾದ್ರೂ ಸಾಧನೆ ಮಾಡ್ತಾರೆ.. ಇವತ್ತೇ ಸಚಿನ್ ಮೂರು ದಾಖಲೆ ಮಾಡ್ಲಿಲ್ವಾ? :-)

ಲಕ್ಷ್ಮಿ, ನಮ್ಮ ಬ್ಲಾಗಿಗೆ ನೀವೂ ಹೊಸಬರು, ಸ್ವಾಗತ. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತಿಯಿದೆ :-)

Sreenivas V ಹೇಳಿದರು...

Hi Harish,
No words to say about Rebello. Unorgettable! Another question: How to write these comments in kannada? Could you please let me know?

Thanks in advance!

Sreeny

Harisha - ಹರೀಶ ಹೇಳಿದರು...

ಶ್ರೀನಿ, ಇಲ್ಲಿ ನೋಡಿ: http://google.com/transliterate/indic/Kannada
ಆ ಪುಟದಲ್ಲಿ ನೀವು ಇಂಗ್ಲಿಷ್ ಅಕ್ಷರಗಳನ್ನು ಬರೆದರೆ ಅದಕ್ಕೆ ತಕ್ಕುದಾದ ಕನ್ನಡ ಅಕ್ಷರಗಳು ಮೂಡುತ್ತವೆ.

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ..

sunaath ಹೇಳಿದರು...

ಹರೀಶ,
ಮನಸ್ಸು ಬೆಳಗುವ ಲೇಖನ.
ಅಭಿನಂದನೆಗಳು.

ಮನಸ್ವಿ ಹೇಳಿದರು...

ಅರೆ ಇದು ನಾನೆಲ್ಲೊ ಕೇಳಿದಂಗೆ ಇದ್ದಲಾ ಅಂತ ಯೋಚನೆ ಮಾಡ್ತ ಇದಿದ್ದಿ.. ನೀನು ಅವತ್ತೊಂದು ದಿನ you tube link ಕಳಿಸಿ ಹೇಳಿದ್ಯಲ google talk ಅಲ್ಲಿ :)ನಾವಿಬ್ಬರು ಸುಮಾರು ಹೊತ್ತು ಮಾತಡಿತ್ತು... ಈ ಸಾದಕನ ಮೇಲೆ ಇಡಿ ದೇಶದ ಮಾನನೇ ಪಣಕ್ಕೆ ಇಟ್ಟವರಿಗೆ ಹಾಗು ದೇಶದ ಮಾನ ಹರಾಜಾಗದಂತೆ ಸರಿಯಾದ ಗುರಿಗೆ ಬಾಣ ಬಿಟ್ಟಿದ್ದಕ್ಕೆ :)ಹ್ಯಾಟ್ಸ್ ಆಫ್ :p

Harisha - ಹರೀಶ ಹೇಳಿದರು...

ಸುನಾಥ್, ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

ಆದಿತ್ಯ, ಹೌದು.. ಅದೇಯ.. ಇನ್ನೊಂದಿಷ್ಟು ವಿವರ ಕಲೆ ಹಾಕಿ ಈ ಲೇಖನ ಬರ್ದಿ..

ಸಂಭವಾಮಿ ಯುಗೇ ಯುಗೇ ಹೇಳಿದರು...

ಲೇಖನ ಚೆನ್ನಾಗಿದೆ. ನಿಮ್ಮ ಬರವಣಿಗೆ ಖುಷಿ ಕೊಡುತ್ತದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

Ittigecement ಹೇಳಿದರು...

ತುಂಬ ಖುಶಿಯಾಯಿತು..ಉತ್ತೇಜಕವಾಗಿದೆ...ಸ್ಪೂರ್ತಿಯೂ ಕೊಡುವಂತಿದೆ..ಬರವಣಿಗೆ realy goooood!!...

Harisha - ಹರೀಶ ಹೇಳಿದರು...

ಮಂದಾರ (ಸಂಭವಾಮಿ ಯುಗೇ ಯುಗೇ), ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬ್ಲಾಗನ್ನು ನೋಡಿದೆ.. ಬಹಳ ಚೆನ್ನಾಗಿದೆ.

ಪ್ರಕಾಶ್ (ಸಿಮೆಂಟು ಮರಳಿನ ಮಧ್ಯೆ), ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

Anveshi ಹೇಳಿದರು...

ನಮ್ಮಲ್ಲಾದರೆ, ಅಂಥವರ ಸಾಧನೆಗೆ ನಾವೇ ಕಾರಣರು ಅಂತ ನಮ್ಮೆಲ್ಲಾ ರಾಜಕಾರಣಿಗಳು ಕ್ಯೂ ನಿಲ್ಲುತ್ತಿದ್ದರು....


ದೀಪಾವಳಿ ಶುಭಾಶಯಗಳು.

Harisha - ಹರೀಶ ಹೇಳಿದರು...

ಅಸತ್ಯಾನ್ವೇಷಿಗಳೇ, ನಿಮ್ಮ ಅನ್ವೇಷಣೆ ಸರಿಯಾಗಿದೆ :-)

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

shivu.k ಹೇಳಿದರು...

ಹರೀಶ್,
ಬಾರ್ಸಿಲೋನ ಒಲಂಪಿಕ್ಸ್ ನಲ್ಲಿ ಈ ಬಿಲ್ಲುಗಾರನ ಬಗ್ಗೆ ನನಗೆ ತುಂಬಾ ಕುತೂಹಲವಿತ್ತು. ಅವನ ಒಂದು ಕ್ಷಣ ಗುರಿತಪ್ಪಿದರೆ ಗತಿ ಏನು ? ಈ ಪ್ರಶ್ನೆ ನನಗೂ ತುಂಬಾ ದಿನದಿಂದ ಕಾಡುತ್ತಿತ್ತು. ಅವರ ಕಠಿಣ ಅಬ್ಯಾಸ, ತರಬೇತಿ, ಸಾಧನೆಗಳ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದೀರಿ. thanks.

Unknown ಹೇಳಿದರು...

ನನ್ನದೊಂದು ಸಲಹೆ
comments ಕೊಡೊ ಕಡೆ ನೆ ಯಾಕೆ ನೀವು Google Transliteration ಇಡಬಾರದು??
ನಿರಂಜನ್ ಕೆ

Harisha - ಹರೀಶ ಹೇಳಿದರು...

ಶಿವು, ನನಗೂ ಆ ಕುತೂಹಲ ಇದ್ದಿದ್ದರಿಂದಲೇ ನಾನು ಅದನ್ನು ಹುಡುಕಲು ಸಾಧ್ಯವಾಯಿತು. ಪ್ರತಿಕ್ರಿಯೆಗೆ ಧನ್ಯವಾದಗಳು. :-)

ನಿರಂಜನ್, comment ಕೊಡೋ form bloggerನ ಫೀಚರ್.. ಆದ್ರೆ Google Transliteration ಅದರ ಭಾಗವಲ್ಲ. ಹಾಗಾಗಿ ಅದನ್ನು ಇಲ್ಲಿ ಒಗ್ಗೂಡಿಸುವುದು ಕಷ್ಟ. ಆದರೂ ಅಸಾಧ್ಯವೇನಲ್ಲ. ಇದರ ಬಗ್ಗೆ ಪ್ರಯತ್ನಿಸುತ್ತೇನೆ. ಸಲಹೆಗೆ ಧನ್ಯವಾದಗಳು. ಬರುತ್ತಿರಿ.

ಮನಸ್ವಿ ಹೇಳಿದರು...

ಆಹಾ ಬ್ಲಾಗರ್ ನಲ್ಲಿ ಗೂಗಲ್ ಟ್ರಾನ್ಸ್ ಲಿಟರೇಷನ್ ಪೇಜ್ ಸೇರ್ಸಿ ಬಿಟ್ಯಾ?ನಂಗೆ ಸಂಪದದಲ್ಲಿ ಇರೋ ಕನ್ವರ್ಟರ್ ಎಂತಕ್ಕೆ ತುಂಬಾ ಬೇಗ ಕನ್ವರ್ಟ್ ಆಗ್ತು, ಜಾವ ಸ್ಕ್ರಿಪ್ಟು ಕಾಣ್ತು, ಹೆಂಗೆ ವರ್ಕ್ ಆಗ್ತು ಅಂತ ಯೋಚನೆ ಮಾಡಿ ಹೇಳು, ಆತರದ್ದು ಇಲ್ಲಿ ಸೇರ್ಸಕ್ಕೆ ಬತ್ತಾ ನೋಡು, :D here is a link http://www.sampada.net./converter

Harisha - ಹರೀಶ ಹೇಳಿದರು...

ಆದಿತ್ಯ, ಸಂಪದದಲ್ಲಿ ಬರಿ key replacement logic ಉಪಯೋಗಿಸಿದ್ದ. ಅದಕ್ಕೆ ಇಂಟರ್ನೆಟ್ ಬೇಕಿಲ್ಲೆ. Google transliteration ಆದ್ರೆ ಒಂದು database ಉಪಯೋಗಿಸಿ, ಜನರು ಹೆಚ್ಚು ಸಲ ಯಾವ ರೀತಿ ಬಳಸ್ತ್ವೋ ಆ ರೀತಿ ಬದಲಾಯಿಸ್ತು.. ಒಂದು ರೀತಿಯಲ್ಲಿ artificial intelligence..

ಅನಾಮಧೇಯ ಹೇಳಿದರು...

nice one...

ಅಂತರ್ವಾಣಿ ಹೇಳಿದರು...

ಅಂಬಿಗ,
ಒಂದು ಥ್ರಿಲ್ ಆಗುವಂತಹ ದೃಶ್ಯ ತೋರಿಸಿದ್ದಕ್ಕೆ ......
ಅಂಗವಿಕಲರು ಏನ್ನನ್ನಾದರು ಸಾಧಿಸ ಬಹುದೆಂಬುದಕ್ಕೆ ಇದೂ ಒಂದು ಉದಾಹರಣೆ.