ಗುರುವಾರ, ಮೇ 20, 2010

ನಾ ಕೂಡ ನಲಿವೆ

ನಮ್ಮೂರ ಜಾತ್ರೆಲ್ಲಿ ಕಪ್ಪಡರೋ ಹೊತ್ತಲ್ಲಿ
ನನಗಾಗಿ ಕಾದಿದ್ದು ನಿಜವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ರಥಬೀದಿ ಬದಿಯಲ್ಲಿ ಗೆಳತಿಯರ ಸಂದಲ್ಲಿ
ಕುಡಿನೋಟ ಬೀರಿದ್ದು ದಿಟವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ಮುಸ್ಸಂಜೆ ಮಬ್ಬಲ್ಲಿ ನಿನ್ನ ತುಟಿಯಂಚಲ್ಲಿ
ನನಗಲ್ಲಿ ಕಂಡಿದ್ದು ನಗುವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ಮರೆಯಾಗೋ ಮೊದಲಲ್ಲಿ ನಿನ್ನ ಕಣ್ಣಂಚಲ್ಲಿ
ಮಿಂಚಾಗಿ ಮೂಡಿದ್ದು ಒಲವೆ?
ಹೌದೆನ್ನು ಚೆಲುವೆ, ನಾ ಕೂಡ ನಲಿವೆ

ಗುರುವಾರ, ಏಪ್ರಿಲ್ 15, 2010

ದೂರ

ಬಗೆಬಗೆಯ ಕನಸು ಮೂಡಿಹ,
ಏಳು ಬಣ್ಣಗಳ ಬದುಕಿನಲಿ,
ಬರಿದಾದ ಮನಸು ಏತಕೆ?
ನೀನಿರಲು ನನ್ನ ಹೃದಯದೊಳು,
ಈ ವಿರಹವೇತಕೆ?
ಮಾತು ಮೌನವಾಗಿಹ,
ಸುಂದರ ಸಮಯದೊಳು ಈ ದೂರವೇತಕೆ?

ಭಾನುವಾರ, ಏಪ್ರಿಲ್ 11, 2010

ಬಯಕೆ

ಕನವರಿಕೆಯ ಮಾತು ನಿನ್ನ ಮನದ ಮೂಲದಿ ತೆರೆಯಲಿ,
ಹಗಲುಗನಸಲಿನ್ನು ಎನ್ನ ನೆರಳು ನಿನಗೆ ತೋರಲಿ,
ಸಿಹಿನಗುವು ಮೂಡಲಿ ಇನ್ನು ನೀ..
ನನ್ನ ಸನಿಹ ಬಯಸಲಿ.

ಬುಧವಾರ, ಮಾರ್ಚ್ 24, 2010

ಪ್ರತಿಬಿಂಬ

ಹೃದಯವೆಂಬ ಕನ್ನಡಿಯಲಿ
ಬಿಂಬಿಸಿದ ನಿನ್ನ ಛಾಯೆಯ
ನಗುವಿನಲಿ ಮರೆಯಲೆತ್ನಿಸಿದೆ
ಆದರೆ ಕಣ್ಣೀರಿನಲಿ ನೀ ಮೂಡಿದ್ದೆ
ನಿದ್ರೆಯಲಿ ಮುಚ್ಚಲೆತ್ನಿಸಿದೆ
ಕನಸಿನಲ್ಲೂ ನೀ ಬಂದು ಕುಳಿತಿದ್ದೆ
ವಿದ್ಯಾರ್ಜನೆಯ ಬೆಳಕ ಹಚ್ಚಿದೆ
ಆ ದೀಪದಡಿಯಲ್ಲಿ ನೀ ನಕ್ಕಿದ್ದೆ
ಕೊನೆಗೆ ಬಳಲಿ ಕನ್ನಡಿಯ ಒಡೆದಾಗ
ನೂರು ಚೂರಿನಲ್ಲೂ ನೀ ಕಾಡುತ್ತಿರುವೆ

ಮಂಗಳವಾರ, ಫೆಬ್ರವರಿ 16, 2010

ಮೌನಾಗ್ನಿ

ಮಲ್ಲಿಗೆಯು ಸುವಾಸನೆ ಬೀರಲಿಲ್ಲ
ನಿನ್ನ ನೀಳ ಕೇಶ ರಾಶಿಯಂತೆ
ನಕ್ಷತ್ರಗಳು ಹೊಳೆಯಲಿಲ್ಲ
ನಿನ್ನ ಕಮಲದ ಕಂಗಳಂತೆ
ಮೊಗ್ಗುಗಳು ಅರಳಲಿಲ್ಲ
ನಿನ್ನ ಹವಳದ ತುಟಿಗಳಂತೆ

ಅಮೃತಶಿಲೆಯು ನುಣುಪಾಗಿ ತೋರಲಿಲ್ಲ
ನಿನ್ನ ಸುಕೋಮಲ ಕೆನ್ನೆಯಂತೆ
ನವಿಲುಗಳು ನಾಟ್ಯ ಮಾಡಲಿಲ್ಲ
ನಿನ್ನ ವೈಯಾರದ ನಡಿಗೆಯಂತೆ
ಹಕ್ಕಿಯ ಕಲರವ ಇಂಪಾಗಿ ಕೇಳಲಿಲ್ಲ
ನಿನ್ನ ಕಾಲ್ಗೆಜ್ಜೆಯ ಸದ್ದಿನಂತೆ

ಹರಿವ ನೀರು ಜುಳು ಜುಳು ನಾದ ಹೊರಡಿಸಲಿಲ್ಲ
ನೀನು ಗುನುಗುನಿಸುವ ಮಧುರ ಮಾತಿನಂತೆ
ಜೇನು ಕೂಡ ಸಿಹಿ ನೀಡಲಿಲ್ಲ
ನಿನ್ನ ಅಧರ ಸ್ಫುರಿಸಿ ನೀಡಿದಂತೆ
ಸೂರ್ಯನ ಕಿರಣವು ಕಾವೇರಿಸಲಿಲ್ಲ
ನಿನ್ನ ಬಿಗಿದಪ್ಪುಗೆಯು ಕಾವೇರಿಸಿದಂತೆ

ಹಾಗೆಯೇ ಬೆಂಕಿ ಕೂಡ ಸುಟ್ಟಿರಲಿಲ್ಲ
ಈ ನಿನ್ನ ಮೌನ ನನ್ನ ಸುಡುತ್ತಿರುವಂತೆ