ಗುರುವಾರ, ಡಿಸೆಂಬರ್ 25, 2008

ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್ ಅಬೌಟ್ ಕನ್ನಡ ಆನ್ಲೈನ್!

ಇದೇನಪ್ಪ ಇದು ಕನ್ನಡದ ಬಗ್ಗೆ ಅಂತ ಹಾಕಿ ಪೂರ್ತಿ ಇಂಗ್ಲಿಷ್ ಅಲ್ಲಿ ಟೈಟಲ್ ಕೊಟ್ಟಿದ್ದಾನೆ ಅಂದ್ಕೋಬೇಡಿ. ಅಂತರಜಾಲದಲ್ಲಿ, ತಂತ್ರಾಂಶಗಳಲ್ಲಿ ನಾವೆಲ್ಲ ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್ (FAQ) ನೋಡುತ್ತಲೇ ಇರುತ್ತೇವೆ. ನಿರ್ದಿಷ್ಟ ಕೆಲಸವನ್ನು ಮಾಡುವುದು ಹೇಗೆ, ವೈಶಿಷ್ಟ್ಯಗಳ ಬಗ್ಗೆ ಮಾಹಿತಿ, ಇನ್ನೂ ಅನೇಕ ವಿಷಯಗಳ ಬಗ್ಗೆ ತಿಳಿಸಲು ಇದನ್ನು ಹಾಕಿರುತ್ತಾರೆ. ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಈಗ ಅಂತರಜಾಲದಲ್ಲಿ ಗಣನೀಯವಾಗಿ ಮುಂದಿದೆ. ಸಂಪದ, ದಟ್ಸ್-ಕನ್ನಡ, ವೆಬ್ ದುನಿಯಾ, ಕೆಂಡಸಂಪಿಗೆ, ವಿಸ್ಮಯನಗರಿ, ಕನ್ನಡ ಹನಿಗಳು, ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ವಿಕಿಪೀಡಿಯಾ - ಹೀಗೆ ಅನೇಕ ತಾಣಗಳಲ್ಲಿ ಕನ್ನಡಿಗರು ಬರೆದು/ಓದಿ ಸಂತಸ ಪಡುತ್ತಿದ್ದಾರೆ. ವಿಕಿಪೀಡಿಯಾದ ಲೋಗೋ ಕನ್ನಡದ "ವಿ" ಅಕ್ಷರವನ್ನು ಒಳಗೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. (ಯುನಿಕೋಡ್ "ವ" ಮತ್ತು ಅದರ ಹಿಂದೆ "ಇ" ಬಂದಿದೆ.. ಅದು ಬೇರೆ ವಿಷಯ. ದೇವನಾಗರಿಯ वि ಕೂಡ ಹೀಗೇ ರೂಪಾಂತರಗೊಂಡಿರುವುದನ್ನು ಗಮನಿಸಬಹುದು)

wikipedia logo

ಬ್ಲಾಗರ್ ಹಾಗೂ ವರ್ಡ್ ಪ್ರೆಸ್ ನ ಕನ್ನಡ ಬ್ಲಾಗುಗಳಂತೂ ಕವನ, ಕಥೆ, ಪ್ರಯಾಣ, ರಾಜಕೀಯ, ಸುದ್ದಿ, ಅನುಭವ, ವಿಮರ್ಶೆ, ಗಾದೆ, ವಿಜ್ಞಾನ, ಸಾಹಿತ್ಯ, ಕಲೆ - ಹೀಗೆ ವೈವಿಧ್ಯಗಳಿಂದ ತುಂಬಿಹೋಗಿದೆ. ಆದರೂ...

ಅಂತರಜಾಲದಲ್ಲಿ ಕನ್ನಡ ಉಪಯೋಗಿಸುವುದರ ಬಗ್ಗೆ ಕೂಡ ಎಲ್ಲರಿಗೂ ತಿಳಿದಿಲ್ಲ. ಹಲವರು ತಮ್ಮ ಅನಿಸಿಕೆಗಳನ್ನು ಆಂಗ್ಲ ಅಕ್ಷರಗಳನ್ನು ಬಳಸಿ ಬರೆಯುತ್ತಾರೆ. ಕೆಲವರು ಕನ್ನಡದಲ್ಲಿ ಹೇಗೆ ಬರೆಯುವುದು ಎಂದು ಕೂಡ ಕೇಳಿದ್ದಾರೆ. ನನ್ನ ಹಲವು ಗೆಳೆಯ/ಗೆಳತಿಯರು ನನ್ನ ಜೊತೆ ಚಾಟ್ ಮಾಡುವಾಗ/ಬ್ಲಾಗ್ ಓದುವಾಗ ನೀನು ಕನ್ನಡದಲ್ಲಿ ಹೇಗೆ ಬರೆಯುತ್ತೀಯ ಎಂದು ಕೇಳುತ್ತಿರುತ್ತಾರೆ. ಕೆಲವರು ಕನ್ನಡದಲ್ಲಿ ನಾನು ಏನಾದರೂ ಕಳಿಸಿದಾಗ ಇದೇನೋ ಇದು ಬಾಕ್ಸ್ ಬಾಕ್ಸ್ ಡಿಸ್ಪ್ಲೇ ಆಗ್ತಿದೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಬರಹದಲ್ಲಿ ಬರೆದು ಮತ್ತೆ ಇಲ್ಲಿ ಬಂದು ಕಾಪಿ-ಪೇಸ್ಟ್ ಮಾಡುವುದು ತಲೆನೋವು ಮಾರಾಯ ಎಂದು ಇಂಗ್ಲಿಷ್ ಅಕ್ಷರಗಳಿಗೆ ಮೊರೆಹೋಗುತ್ತಾರೆ. ಅವರಿಗೆಲ್ಲ ಸಹಾಯವಾಗಲಿ ಎಂಬ ಆಶಯದಿಂದ ಈ ಲೇಖನ ಬರೆಯುತ್ತಿದ್ದೇನೆ.

ಈಗ ನೇರವಾಗಿ ವಿಷಯಕ್ಕೆ ಬರೋಣ.

*****

ಅಂತರಜಾಲದಲ್ಲಿ ಕನ್ನಡ ಬಳಸಲು ಏನೇನು ಬೇಕು?
  • ಒಂದು ಗಣಕಯಂತ್ರ
  • ಅಂತರಜಾಲ ಸಂಪರ್ಕ
ಇವೆರಡಿದ್ದರೆ ಕನ್ನಡದಲ್ಲಿ ಬರೆಯುವುದು/ಓದುವುದು ಸಾಧ್ಯ. ಬಹುಪಾಲು ಜನರು ಉಪಯೋಗಿಸುತ್ತಿರುವುದು ವಿಂಡೋಸ್ ಆಗಿರುವುದರಿಂದ ಅದರಲ್ಲಿ ಓದುವುದು/ಬರೆಯುವುದು ಹೇಗೆ ಎಂಬುದನ್ನು ಇಲ್ಲಿ ಬರೆಯುತ್ತಿದ್ದೇನೆ.

ವಿಂಡೋಸ್ ಎಕ್ಸ್.ಪಿ. ಬಳಸುತ್ತಿದ್ದೇನೆ. ಆದರೆ ಬ್ಲಾಗುಗಳಲ್ಲಿ ಒತ್ತಕ್ಷರಗಳಿರುವ ಕನ್ನಡ ಅಕ್ಷರಗಳು ಬಿಡಿಬಿಡಿಯಾಗಿ ಕಂಡು ಓದಲು ಕಷ್ಟವಾಗುತ್ತಿದೆ. ಇದನ್ನು ಸರಿಪಡಿಸುವುದು ಹೇಗೆ?

ಅಂತರಜಾಲದಲ್ಲಿ ಕನ್ನಡ ಹೆಚ್ಚಾಗಿ ಬಳಕೆಯಲ್ಲಿರುವುದು ಯೂನಿಕೋಡ್ ಅಕ್ಷರಗಳು. ಅವು ಸರಿಯಾಗಿ ಮೂಡಿಬರಲು ಅದಕ್ಕೆ ಬೇಕಾದ ತಂತ್ರಾಂಶ ಸಹಕಾರ ಅಗತ್ಯ. ಅದಕ್ಕಾಗಿ ನೀವು ಮಾಡಬೇಕಾದುದು:
  • Start -> Control Panel ಗೆ ಹೋಗಿ.
  • ನೀವು Category View ನಲ್ಲಿ ಇದ್ದರೆ Date, Time, Language and Regional Options ಅನ್ನು ತೆರೆದುಕೊಳ್ಳಿ. ನೀವು Classic View ನಲ್ಲಿ ಇದ್ದರೆ ಈ ಕ್ರಮದ ಅಗತ್ಯವಿಲ್ಲ.
  • Regional and Language settings ಅನ್ನು ತೆರೆಯಿರಿ.
  • ಅದರಲ್ಲಿ Languages ಎನ್ನುವ ಟ್ಯಾಬ್ ಇರುತ್ತದೆ. ಅಲ್ಲಿಗೆ ಹೋಗಿ.
  • Install files for complex script and right-to-left languages (including Thai) ಎಂದು ಇರುವ ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿಕೊಂಡು Apply ಮಾಡಿ. ಈ ಆಯ್ಕೆಯನ್ನು ಸ್ಥಿರಗೊಳಿಸಲು OK ಒತ್ತಿ. ನಿಮಗೆ ಆಪರೇಟಿಂಗ್ ಸಿಸ್ಟಂನ ಸಿಡಿ ಬೇಕಾಗಬಹುದು.
  • ಗಣಕವನ್ನು ರೀಸ್ಟಾರ್ಟ್ ಮಾಡಿ ಕನ್ನಡ ಬ್ಲಾಗುಗಳನ್ನು ಓದಲು ಪ್ರಯತ್ನಿಸಿ.

ನಾನೂ ಕನ್ನಡದಲ್ಲಿ ಬರೆಯಬೇಕು. ಅದು ಹೇಗೆ?

ಕನ್ನಡದಲ್ಲಿ ಬರೆಯಲು ಸಹಾಯಕವಾಗುವ ಅನೇಕ ತಂತ್ರಾಂಶಗಳಿವೆ. ಅವುಗಳಲ್ಲಿ ಜನಪ್ರಿಯವಾಗಿರುವುದು ಬರಹ ತಂತ್ರಾಂಶ. ಇದನ್ನು http://www.baraha.com/baraha.htm ನಿಂದ ಉಚಿತವಾಗಿ ಪಡೆದುಕೊಳ್ಳಬಹುದು. ಆಂಗ್ಲ ಅಕ್ಷರಗಳಲ್ಲಿ ಬರೆದು Ctrl+T ಒತ್ತಿದರೆ ತನ್ನಿಂತಾನೇ ಬರೆದಿರುವ ಲೇಖನ ಲಿಪ್ಯಂತರಗೊಳ್ಳುತ್ತದೆ. ಇದರಲ್ಲಿ ಕನ್ನಡವಲ್ಲದೆ ಇನ್ನೂ ಅನೇಕ ಭಾರತೀಯ ಭಾಷೆಗಳನ್ನು ಬರೆಯಬಹುದು.

ನಾನು ಕನ್ನಡದಲ್ಲಿ ಬರೆದು ಬ್ಲಾಗಿನಲ್ಲಿ ಹಾಕಿದ ಲೇಖನ ಬೇರೆ ಗಣಕಗಳಲ್ಲಿ ಸರಿಯಾಗಿ ಕಾಣುತ್ತಿಲ್ಲ. ಏಕೆ ಹೀಗೆ?

ಬರಹದಲ್ಲಿ ಅದರದ್ದೇ ಆದ ಫಾಂಟ್ ಉಪಯೋಗಿಸಲ್ಪಡುತ್ತದೆ. ಅದನ್ನು ನೇರವಾಗಿ ಅಂತರಜಾಲಕ್ಕೆ ಹಾಕಿದರೆ ಬರಹದ ಫಾಂಟ್ ಇರುವ ಗಣಕದಲ್ಲಿ ಮಾತ್ರ ಓದಲು ಸಾಧ್ಯವಾಗುತ್ತದೆ. ಹಾಗಾಗಿ ಅಂತರಜಾಲದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಯೂನಿಕೋಡ್ ಉಪಯೋಗಿಸಿ ಬರೆದರೆ ಎಲ್ಲ ಕಡೆ ಓದಲು ಸಾಧ್ಯವಾಗುತ್ತದೆ. ಬರಹದಲ್ಲಿ ಕಾಪಿ ಮಾಡುವಾಗ ರೈಟ್ ಕ್ಲಿಕ್ ಮಾಡಿ Copy Special... ಆಯ್ಕೆ ಮಾಡಿಕೊಂಡು ಅದರಲ್ಲಿ Text (UNICODE) ಆಯ್ಕೆ ಮಾಡಿಕೊಂಡು ನಂತರ ಬ್ಲಾಗಿನಲ್ಲಿ ಪೇಸ್ಟ್ ಮಾಡಿದರೆ ಎಲ್ಲ ಗಣಕಗಳಲ್ಲೂ ಓದಬಹುದು.

ನಾನು ಬಳಸುತ್ತಿರುವ ಕಛೇರಿಯ ಗಣಕದಲ್ಲಿ ಬರಹ ಇನ್ಸ್ಟಾಲ್ ಮಾಡಲು ನನಗೆ ಅನುಮತಿಯಿಲ್ಲ. ಏನು ಮಾಡಲಿ?

ಬಳಸಲು ಬರಹಕ್ಕಿಂತ ಸುಲಭವಾಗಿರುವ ಇನ್ನೊಂದು ವಿಧಾನವಿದೆ. ಅದು ಗೂಗಲ್ ಲಿಪ್ಯಂತರಣ ಸೇವೆ (Transliteration Service). ಅದು ಈ ಪುಟದಲ್ಲಿ ಲಭ್ಯ: http://www.google.com/transliterate/indic/Kannada. ಇದರಲ್ಲಿ ನಾವು ಸಾಧಾರಣವಾಗಿ ಬರೆಯುವಂತೆ ಬರೆದರೂ ಕೂಡ ಚಾಣಾಕ್ಷವಾಗಿ ಲಿಪ್ಯಂತರಗೊಳ್ಳುತ್ತದೆ. ಆದರೆ ಇದು ಅಂತರಜಾಲ ಸಂಪರ್ಕವಿದ್ದಾಗ ಮಾತ್ರ ಲಭ್ಯ. ಇದೂ ಕೂಡ ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

ಚಾಟ್ ಮಾಡುವಾಗ ಬರಹ/ಗೂಗಲ್ ನಲ್ಲಿ ಬರೆದು ಕಾಪಿ ಮಾಡಿ ಮತ್ತೆ ಚಾಟ್ ಮಾಡುವಲ್ಲಿಗೆ ಬಂದು ಪೇಸ್ಟ್ ಮಾಡುವಷ್ಟು ಸಹನೆ ನನಗಿಲ್ಲ. ಇದಕ್ಕೇನಾದರೂ ಸುಲಭ ಉಪಾಯವಿದೆಯೆ?

ನೀವು ಬರಹ ಉಪಯೋಗಿಸುತ್ತಿದ್ದಲ್ಲಿ ಉಪಕರಣ ಪಟ್ಟಿಕೆಯಲ್ಲಿರುವ (toolbar) ನೇರ ಬರಹ (Baraha direct) ಆಯ್ಕೆ ಮಾಡಿಕೊಂಡರೆ ನಿಮಗೆ ಎಲ್ಲಿ ಬೇಕೋ ಅಲ್ಲಿ ನೇರವಾಗಿ ಬರೆಯಬಹುದು. ಬರೆಯುವ ನಡುವೆ ಇಂಗ್ಲಿಷ್ ಬಳಸಬೇಕಾದಲ್ಲಿ F11 ಅಥವಾ F12 ಉಪಯೋಗಿಸಬಹುದು. ನೇರ ಬರಹವನ್ನು ಸ್ಟಾರ್ಟ್ ಮೆನುವಿನಲ್ಲಿ All Programs -> Baraha 7.0 -> Baraha Direct ನಿಂದ ಕೂಡ ತೆರೆದುಕೊಳ್ಳಬಹುದು.

ಬರಹವಿಲ್ಲದಿದ್ದಾಗ ಹೇಗೆ ಕನ್ನಡದಲ್ಲಿ ಸುಲಭವಾಗಿ ಚಾಟ್ ಮಾಡಬಹುದು?

ನೀವು ಬೆಂಕಿನರಿ (ಫೈರ್ಫಾಕ್ಸ್) ಉಪಯೋಗಿಸುತ್ತಿದ್ದಲ್ಲಿ ಈ ವಿಸ್ತರಣೆ (extension) ಹಾಕಿಕೊಳ್ಳಬಹುದು:
https://addons.mozilla.org/en-US/firefox/addon/8960
ಇದನ್ನು ಹಾಕಿಕೊಂಡ ನಂತರ ಯಾವುದೇ ಪುಟದಲ್ಲಿ ಬೇಕಾದರೂ ಗೂಗಲ್ ಲಿಪ್ಯಂತರಣ ಸೇವೆ ಬಳಸಿಕೊಳ್ಳಬಹುದು.

*****


ಈ ಪ್ರಶ್ನೋತ್ತರ ಸರಣಿ ಉಪಯುಕ್ತವೇ? ಇದಕ್ಕೆ ಸೇರಿಸಬಹುದಾದ ಪ್ರಶ್ನೆಗಳಿದ್ದರೆ ತಿಳಿಸಿ.

21 ಕಾಮೆಂಟ್‌ಗಳು:

shivu K ಹೇಳಿದರು...

ಹರೀಶ್,

ಇದೊಂದು ಒಳ್ಳೆಯ ವಿಚಾರ ! ಕೆಲವು ಗೆಳೆಯರಿಗೆ ಖಂಡಿತ ಉಪಯೋಗವಾಗುತ್ತದೆ...ನಾನು ನಿಮ್ಮ ಪದ್ದತಿಯನ್ನು ಈಗಾಗಲೇ ಉಪಯೋಗಿಸುತ್ತಿದ್ದೇನೆ. ತುಂಬಾ ಚೆನ್ನಾಗಿ ಇದನ್ನು ವಿವರಿಸಿದ್ದೀರಿ...good ಮುಂದುವರಿಸಿರಿ ಇಂಥ ಸೇವೆಯನ್ನು,.
ಶಿವು.

ವಿಕಾಸ್ ಹೆಗಡೆ ಹೇಳಿದರು...

ಪೂರಕ ಮಾಹಿತಿಗೆ.....

http://bhashaindia.com
ವಿಂಡೋಸ್ ಮತ್ತು ಆಫೀಸ್ ಗಳಲ್ಲಿ ಕನ್ನಡ

sunaath ಹೇಳಿದರು...

ತುಂಬಾ ಉಪಯುಕ್ತ ಮಾಹಿತಿ.
ನಿಮಗೆ ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ನನಗಂತೂ ಉಪಯುಕ್ತವಾಯಿತು..

ಬಹಳ ಬೇಕಾದ ಮೂಲ ವಿಚಾರ..
ಸರಳವಾಗಿ ವಿವರಿಸಿದ್ದೀರಿ..
ಅಭಿನಂದನೆಗಳು...

Keshav Kulkarni ಹೇಳಿದರು...

ಇನ್ನೊಂದು ಮಾಹಿತಿ:
ನಿಮ್ಮ ಆಫೀಸ್ ಕಂಪ್ಯೂತರಿನಲ್ಲಿ ಬರಹ ಡೌನ್‍ಲೋಡ್ ಮಾಡಲು ಬಿಡದಿದ್ದರೂ ಬರಹವನ್ನು ಸುಲಭವಾಗಿ ಉಪಯೋಗಿಸಬಹುದು. barahaIME ಯನ್ನು USB ನಲ್ಲಿ download ಮಾಡಿಕೊಳ್ಳಿ. ಆ USBಯನ್ನು ನಿಮ್ಮ ಆಫೀಸಿನ ಕಂಪ್ಯೂಟರಿಗೆ ಹಾಕಿ, USBನಲ್ಲಿ barahaIME ಡಬಲ್ ಕ್ಲಿಕ್ ಮಾಡಿ; ಕಂಪ್ಯೂಟರಿನ ರೈಟ್‍ಹ್ಯಾಂಡ್ ಟ್ರೇ ನಲ್ಲಿ KN ಮೂಡುತ್ತೆ, ಕನ್ನಡದಲ್ಲಿ ಟೈಪ್ ಮಾಡಲಿ ಶುರು ಮಾಡಿ. ನಾನೀಗ ಮಾಡುತ್ತಿರುವುದು ಅದನ್ನೇ!

-ಕೇಶವ (www.kannada-nudi.blogspot.com)

ಅಂತರ್ವಾಣಿ ಹೇಳಿದರು...

ಹೊಸಬರಿಗೆಲ್ಲಾ ಒಳ್ಳೆ ವಿಷಯ ತಿಳಿಸಿದ್ದೀಯ ಹರಿ :)
ಹೀಗೆ ಏನಾದರು ಉಪಯುಕ್ತ ಇದ್ದರೆ ತಿಳಿಸು..

Ashok Uchangi ಹೇಳಿದರು...

ಹೊರರಾಜ್ಯ/ದೇಶದಲ್ಲಿರುವ ನನ್ನ ಮಿತ್ರರೂ/ಸಂಬಂಧಿಗಳು ಈ ಸಮಸ್ಯೆ ಎದುರಿಸಿ ನನಗೆ ತಿಳಿಸುತ್ತಿದ್ದರು.ನಿಮ್ಮ ಮಾಹಿತಿ ನನಗೆ ತುಂಬಾ ಉಪಯೋಗವಾಗಿದೆ.
ಧನ್ಯವಾದಗಳು
ಅಶೋಕ ಉಚ್ಚಂಗಿ
http://mysoremallige01.blogspot.com/

Harish - ಹರೀಶ ಹೇಳಿದರು...

ಶಿವು, ವಿಕಾಸ್, ಸುನಾಥ್ ಕಾಕಾ, ಪ್ರಕಾಶಣ್ಣ, ಕೇಶವ, ಜಯ್, ಅಶೋಕ್: ನಿಮಗೆಲ್ಲರಿಗೂ ಪ್ರತಿಕ್ರಿಯೆಗೆ ಧನ್ಯವಾದಗಳು.

ವಿಕಾಸ, ಪೂರಕ ಮಾಹಿತಿ ನೀಡಿದ್ದಕ್ಕೆ ಥ್ಯಾಂಕ್ಸ್ :-)

ಕೇಶವ, ಬರಹ IME ಅನ್ನು ಉಪಯೋಗಿಸಿರಲಿಲ್ಲ. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

shreeshum ಹೇಳಿದರು...

ಹರಿ
ನನಗೆ ಬಹುಪಾಲು ಜನರು ಕೇಳುವ ಪ್ರಶ್ನೆಗೆ ಇನ್ನು ಈ ಬರಹದ ಲಿಂಕ್ ಕೊಟ್ಟರೆ ನನ್ನ ಕೆಲಸ ಮುಗಿಯಿತು. ಸಿಂಪಲ್ ಆಗಿ ಹೆಳಿಕೊಟ್ಟಿದ್ದಕ್ಕೆ ತ್ಯಾಂಕ್ಸ್

Rajesh Hegde ಹೇಳಿದರು...

ಒಳ್ಳೆಯ ಲೇಖನ. ನಿಜ ಇತ್ತೀಚಿಗೆ ಕನ್ನಡದಲ್ಲಿ ಅಂತರ್ಜಾಲ ತಾಣ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದು ಕನ್ನಡಿಗರೆಲ್ಲ ಹೆಮ್ಮೆ ಪಡಬೇಕಾದ ವಿಚಾರ.


--ರಾಜೇಶ ಹೆಗಡೆ
www.vismayanagari.com

Harish - ಹರೀಶ ಹೇಳಿದರು...

ರಾಘವೇಂದ್ರಣ್ಣ (shreeshum), ನಂದೂ ಅದೇ ಪ್ಲ್ಯಾನ್! ಥ್ಯಾಂಕ್ಸ್!

ರಾಜೇಶ್, ಬ್ಲಾಗಿಗೆ ಸ್ವಾಗತ. ನಾನು ನಿಮ್ಮ ವಿಸ್ಮಯನಗರಿಯ ಖಾಯಂ ಓದುಗ.. ಅದನ್ನು ಈ ಲೇಖನದಲ್ಲಿ ಹೇಗೆ ಮರೆತೆ ಎಂದು ತಿಳಿಯುತ್ತಿಲ್ಲ! ಪ್ರತಿಕ್ರಿಯಿಸಿ ನೆನಪಿಸಿದ್ದಕ್ಕೆ ಧನ್ಯವಾದಗಳು.. ಈಗಲೇ ಸೇರಿಸುತ್ತೇನೆ.

Aparna C K ಹೇಳಿದರು...

ತುಂಬಾ ಧನ್ಯವಾದ, ಉಪಯುಕ್ತವಾದ ಮಾಹಿತಿ.

ಮನಸ್ವಿ ಹೇಳಿದರು...

ಈ ಪ್ರಶ್ನೋತ್ತರ ಸರಣಿ ತುಂಬಾ ಉಪಯುಕ್ತವಾಗಿದೆ.. ಧನ್ಯವಾದಗಳು,ನನ್ನದೂ ಒಂದು ಚಿಕ್ಕ ಮಾಹಿತಿ!
xp install ಮಾಡುವ ಸಮಯದಲ್ಲೇ Asian complex script support ಸ್ಥಾಪನೆ ಮಾಡಿಕೊಳ್ಳಬಹುದು.

ಅಂದಹಾಗೆ ಪ್ರಶ್ನೆಗಳಿದ್ದರೆ ತಿಳಿಸಿ ಎಂದಿದ್ದೀಯ.. ನಾನು ಯಾವಾಗಲು ಪ್ರಶ್ನೆ ಕೇಳ್ತಾನೆ ಇರ್ತೀನಿ ಅಲ್ಪಾ.. ಒಂದಿಷ್ಟು ಇಲ್ಲೂ ಕೇಳ್ಬಿಡ್ತೀನಿ ;) Xp install ಮಾಡುವಾಗ complex script ಇನ್ಸ್ಟಾಲ್ ಮಾಡಿಕೊಳ್ಳದಿದ್ದಲ್ಲಿ ಕೆಲವೊಮ್ಮೆ Install files for complex script and right-to-left languages (including Thai) ಆಯ್ಕೆ
Regional Options ನಲ್ಲಿ ಲಭ್ಯವಿರುವುದಿಲ್ಲ ಆಗ ನಾವೇನು ಮಾಡಬೇಕು ?

೨)ಕೆಲವು ಗಣಕಯಂತ್ರದಲ್ಲಿ ಕನ್ನಡ ಅಕ್ಷರಗಳ ಮಾಟ ಓದಲು ಕಷ್ಟಕರವಾಗಿರುತ್ತವೆ ಅದಕ್ಕೆ ಕಾರಣವೇನು? ಹಾಗು ಅದನ್ನು ಸರಿಪಡಿಸುವುದು ಹೇಗೆ?

ತುಂಬಾ ದಿನ ಆಯ್ತು ನೀನು ಗೂಗಲ್ಲಿನಲ್ಲಿ ಸಿಗದೆ ಸೋ ಸಂಬಂದವಿಲ್ಲದ ಪ್ರಶ್ನೆ ಹಾಗು ನಾನು ನಿನ್ನ ಹತ್ತಿರ ಕೇಳಬೇಕಾಗಿದ್ದ ಪ್ರಶ್ನೆ ಕೇಳ್ತಾ ಇದೀನಿ,
೩)ಲ್ಯಾಪ್ ಟಾಪಿನಲ್ಲಿ screen fold ಮಾಡಿದರೆ hybernate(stand-by) mode ಗೆ ಹೋಗುತ್ತಿದೆ ಅದನ್ನು ಬದಲಾಯಿಸಿ display ಮಾತ್ರವೇ Off ಆಗಬೇಕು ಗಣಕಯಂತ್ರ ಕಾರ್ಯನಿರ್ವಹಿಸುತ್ತಾ ಇರುವಂತೆ ಮಾಡುವುದು ಹೇಗೆ???

Pramod ಹೇಳಿದರು...

ಕನ್ನಡ ಲಿ೦ಕು/ಸಾಫ್ಟ್ ವೇರ್ ಗಳ ಬಗ್ಗೆ ನಾನು ಒ೦ದು ಪೋಸ್ಟ್ ಬರೆದಿದ್ದೀನಿ @http://pramodc.wordpress.com/2008/11/12/

@ಮನಸ್ವಿ,
Start->control panel-> power options
ಇಲ್ಲಿ choose what closing lid does ಎ೦ಬ ಲಿ೦ಕು/option ಇದೆ. ಇಲ್ಲಿ Do Nothing ಮಾಡಿ. ಲ್ಯಾಪ್ ಟಾಪ್ ಸುಮ್ಮನಿರುತ್ತೆ.

Girish ಹೇಳಿದರು...

ತುಂಬಾ ಉಪಯುಕ್ತ ಮಾಹಿತಿ.
gitish

ಪ್ರकवि ಹೇಳಿದರು...

ನೀವು ಕೊಟ್ಟ http://www.google.com/transliterate/indic/kannada ಕ್ಕೆ ತುಂಬಾ ಧನ್ಯವಾದಗಳು! ಈ ವಾಕ್ಯವನ್ನು ಅದರಿಂದಲೇ ಬರೆದಿರುವೆ!
:-)

Kallare ಹೇಳಿದರು...

ತುಂಬಾ ಉಪಯುಕ್ತ ಮಾಹಿತಿ.....

Harish - ಹರೀಶ ಹೇಳಿದರು...

ಅಪರ್ಣಾ, ಆದಿತ್ಯ, ಪ್ರಮೋದ್, ಗಿರೀಶ್, ಪ್ರಕವಿ(?), ಕಲ್ಲರೆ - ಎಲ್ಲರಿಗೂ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಆದಿತ್ಯ,
ಮೊದಲನೇ ಪ್ರಶ್ನೆ ಈ ಬರಹದಲ್ಲಿ ನಮೂದಿಸಿರುವ "ವಿಂಡೋಸ್ ಎಕ್ಸ್.ಪಿ. ಬಳಸುತ್ತಿದ್ದೇನೆ. ಆದರೆ ಬ್ಲಾಗುಗಳಲ್ಲಿ ಒತ್ತಕ್ಷರಗಳಿರುವ ಕನ್ನಡ ಅಕ್ಷರಗಳು ಬಿಡಿಬಿಡಿಯಾಗಿ ಕಂಡು ಓದಲು ಕಷ್ಟವಾಗುತ್ತಿದೆ. ಇದನ್ನು ಸರಿಪಡಿಸುವುದು ಹೇಗೆ?"
ಎಂಬ ಪ್ರಶ್ನೆಯಂತೆಯೇ ಇದೆ.

ಎರಡನೇ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಯಾವ ಸಂದರ್ಭದಲ್ಲಿ ಆ ಆಯ್ಕೆ ಮಿಸ್ಸಿಂಗು?? ಸ್ವಲ್ಪ ವಿವರ ಕೊಟ್ಟರೆ ಒಳ್ಳೆಯದು.

ಮೂರನೆಯ ಪ್ರಶ್ನೆಗೆ ಪ್ರಮೋದ್ ಅವರಿಂದ ಉತ್ತರ ಸಿಕ್ಕಿದೆ... ನನ್ನ ಅನುಪಸ್ಥಿತಿಯಲ್ಲಿ ಉತ್ತರಿಸಿದ್ದಕ್ಕೆ ಪ್ರಮೋದ್ ಅವರಿಗೆ ವಿಶೇಷ ಧನ್ಯವಾದಗಳು.

ಮನಸ್ವಿ ಹೇಳಿದರು...

ನಾನು ಒಮ್ಮೆ xp install ಮಾಡುವ ಸಮಯದಲ್ಲೇ Asian complex script support ಸ್ಥಾಪನೆ ಮಾಡಿಕೊಳ್ಳಲು ಮರೆತಿದ್ದೆ ಆ ಸಂದರ್ಭದಲ್ಲಿ regional settings ನಲ್ಲಿ ನೀನು ಹೇಳಿದ ಆಯ್ಕೆ ಇರಲಿಲ್ಲ...

GANDI ಹೇಳಿದರು...

ನಿಮ್ಮ ಪದೇ ಪದೇ ಕೇಳುವ ಪ್ರಶ್ನೆಗಳ ಲೇಖನ ಓದಿದೆ ಅದರಲ್ಲಿ ನೀವು ಕನ್ನಡ ಟೈಪಿಸುವ ಕುರಿತು ನೀಡಿರುವ ವಿಷಯಕ್ಕೆ ಮತ್ತೊಂದು ಸೇರ್ಪಡೆ ನೀವು ಭಾರತದ ಪ್ರಥಮ ವೆಬ್ ಬ್ರೌಸರ್ ಇಪಿಕ್ನಲ್ಲಿ ಸುಲಭವಾಗಿ ಯಾವುದೇ ವೆಬ್ ತಾಣದಲ್ಲಿ ಕನ್ನಡ ಟೈಪಿಸಬಹುದು ಭಾರತದ ಪ್ರಮುಖ ಭಾಷೆಗಳು ಇದರಲ್ಲಿ ಲಭ್ಯ. ನಾನೀಗ ಇದನ್ನು ತೈಪಿಸುತ್ತಿರುವುದು ಇಪಿಕ್ನಲ್ಲಿ. ನೀವೊಮ್ಮೆ ಪ್ರಯತ್ನಿಸಿ ಇದೆ ರೀತಿ ವಿಸ್ಮಯನಗರಿ ವೆಬ್ ತಾಣ, ದಟ್ಸ್ ಕನ್ನಡ ಒನ್ ಇಂಡಿಯ ಇತ್ಯಾದಿಗಳಲ್ಲಿ ಕನ್ನಡ ಟೈಪಿಸಬಹುದು.
ಜಿ. ಬಸವರಾಜ್ ಗಂಡಿ, ಬಳ್ಳಾರಿ.

GANDI ಹೇಳಿದರು...

ವಿಂಡೋಸ ತಂತ್ರಾಂಶದ ಗಣಕದಲ್ಲಿ ಕನ್ನಡ ಟೈಪಿಸುವ ಬಗ್ಗೆ ತಿಳಿಸಿದ್ದಿರಿ. ಆದ್ರೆ ಇತ್ತಿಚಿನ ತಿವ್ರತರವಾಗಿ ಬೆಳವನಿಗೆಯ ವಿಂಡೋಸ ತಂತ್ರಾಂಶದ ಮೊಬಿಲೆಗಳಲ್ಲಿ ಕನ್ನಡ ಅಕ್ಷರ ಕಾಣುವ ರೀತಿಯ ಬಗ್ಗೆ ಇರುವ ಕನ್ನಡ ತಂತ್ರಾಶದ ಬಗ್ಗೆ ಬರೆಯಿರಿ. ನಾನು ದಟ್ಸ್ ಕನ್ನಡ ಒನ್ ಇಂಡಿಯದ ತಾಣದಲ್ಲಿ ನೀಡಿರುವ ನಿರ್ದೇಶನಗಳ ಪ್ರಕಾರ ಕನ್ನಡ ಯುನಿಕೋಡ್ ಫಾಂಟ್ ಅನುಸ್ಥಾಪಿಸಿದೆ ಆದರೆ ಒತ್ತಾಕ್ಷರಗಳ ಪ್ರಾಬ್ಲಮ್ ಆಗಿದೆ ಇದಕ್ಕೆ ಪರಿಹಾರ ತಿಳಿಸಿ -ಜಿ. ಬಸವರಾಜ್ ಗಂಡಿ, ಬಳ್ಳಾರಿ.