ಏಪ್ರಿಲ್ ನಲ್ಲಿ ನಡೆದ ವಿಷಯ. ಏನನ್ನೋ ತರಲು ಬ್ರಿಗೇಡ್ ರೋಡಿಗೆ ಹೋಗಬೇಕಾಗಿತ್ತು. ಟ್ರಿನಿಟಿ ವೃತ್ತದಿಂದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಹೋಗುತ್ತಿದ್ದೆ. ಎದುರಿನಿಂದ ಒಬ್ಬ ವ್ಯಕ್ತಿ ಕುಂಟುತ್ತಾ ಬರುತ್ತಿದ್ದ. ಪೋಲಿಯೋ ಆಗಿದ್ದಿರಬೇಕು. ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದನೋ ಏನೋ, ನಡೆದಾಡಲು ಕಷ್ಟ ಪಡುತ್ತಿದ್ದ. "ಸಾರ್.. ಐ ವಾಂಟ್ ಟು ಗೋ ಟು ಮೆಜೆಸ್ಟಿಕ್... ಐ ಡೋಂಟ್ ಹ್ಯಾವ್ ಮನಿ. ಪ್ಲೀಸ್ ಗಿವ್ ೧೦ ರುಪೀಸ್" ಎಂದು ಕೇಳಿದ. ನೋಡಿ ಕನಿಕರ ಮೂಡಿತು. ಹತ್ತು ರೂಪಾಯಿ ತೆಗೆದು ಕೊಟ್ಟೆ.
ಸುಮಾರು ಹದಿನೈದು ದಿನಗಳು ಕಳೆದಿರಬಹುದು. ಭಾನುವಾರವಾಗಿದ್ದರಿಂದ ಮಧ್ಯಾಹ್ನದ ಅಡಿಗೆಗೆ ತರಕಾರಿ ತರಲು ಇಂದಿರಾನಗರದ ೮೦ ಅಡಿ ರಸ್ತೆಯಲ್ಲಿ ಬರುತ್ತಿದ್ದೆ. "ಸಾರ್.. ಐ ವಾಂಟ್ ಟು ಗೋ ಟು ಮೆಜೆಸ್ಟಿಕ್..." ಎಂಬ ಧ್ವನಿ ಕೇಳಿತು. ಅದೇ ವ್ಯಕ್ತಿ! ಎಲಾ ಇವನ! ದುಡ್ಡು ಕಳೆದುಕೊಂಡು ಮೆಜೆಸ್ಟಿಕ್ಕಿಗೆ ಹೋಗುವುದು ಇವನ ಖಾಯಂ ಉದ್ಯೋಗ!! "ಸ್ವಲ್ಪ ದಿನದ ಹಿಂದೆ ಎಂ.ಜಿ.ರೋಡಿನಲ್ಲಿ ಸಿಕ್ಕಿ ಇದೇ ಕಥೆ ಹೇಳಿದ್ದೆಯಲ್ಲಾ" ಎಂದು ಗದರಿದೆ. ಅವನು ಕಕ್ಕಾಬಿಕ್ಕಿಯಾದವನಂತೆ ಕಂಡ. ಮತ್ತೇನೂ ಕೇಳದೆ ಹಾಗೇ ಮುಂದೆ ಹೋಗಿಬಿಟ್ಟ.
ಕಳೆದ ತಿಂಗಳು ಐ.ಟಿ.ಪಿ.ಎಲ್ ಪಕ್ಕದಲ್ಲಿರುವ ನಮ್ಮ ಆಫೀಸಿನ ಮುಂದೆ ನಡೆದು ಬರುತ್ತಿದ್ದೆ. ಅದೇ ವ್ಯಕ್ತಿ ಮತ್ತೆ ಕಂಡ. ಅವನಿಗೆ ನನ್ನ ಗುರುತು ಹೇಗೆ ಸಿಕ್ಕೀತು? "ಸಾರ್.." ಎಂದು ತನ್ನ ವರಸೆ ಆರಂಭಿಸಿದ. ಆದರೆ ಆತ ತನ್ನ ಬಾಯಿ ತೆಗೆಯುವಷ್ಟರಲ್ಲಿಯೇ ಅವನನ್ನು ಸುಮ್ಮನಿರಿಸಿ, ಮತ್ತೆ ಮತ್ತೆ ನನಗೇ ಗಂಟು ಬೀಳುತ್ತೀಯಾ ಎಂದು ಬೈದು ಮುಂದೆ ಹೋದೆ. ಕಾಲು ಹೀಗಾಗಿದ್ದರೂ ಈ ರೀತಿ ಜನರಿಗೆ ಸುಳ್ಳು ಹೇಳಿ ದುಡ್ಡು ಕೀಳುತ್ತಾರಲ್ಲಾ ಎಂದೆನಿಸಿತು.
ಅದಾದ ಮೇಲೆ ನನಗವನು ಕಂಡಿಲ್ಲ. ಆದರೆ ಯಾರೇ ಬೇಡುತ್ತಿರುವವರು ಕಂಡರೂ ಆತ ನನ್ನ ಮನಸ್ಸಿನಲ್ಲಿ ಪ್ರತ್ಯಕ್ಷವಾಗುತ್ತಾನೆ.
***
ಸ್ವಲ್ಪ ದಿನಗಳ ಹಿಂದೆ ರಾತ್ರಿ ಡೈರಿ ಸರ್ಕಲ್ ಬಳಿ ಬಸ್ ಕಾಯುತ್ತಾ ನಿಂತಿದ್ದೆ. ಯಾರೋ ಒಬ್ಬ ಬಂದು "ಕ್ಯಾ ಆಪ್ಕೋ ಹಿಂದೀ ಮಾಲೂಮ್ ಹೈ?" ಎಂದ. ಹೌದೆಂದು ತಲೆಯಾಡಿಸಿದೆ. ಮಹಾರಾಷ್ಟ್ರದಿಂದ ಬಂದಿದ್ದಾಗಿಯೂ ತನ್ನ ಪರ್ಸ್ ಅನ್ನು ಯಾರೋ ಕದ್ದಿದ್ದಾರೆಂದೂ, ಈಗ ಇರಲು-ಉಣ್ಣಲು ದುಡ್ಡಿಲ್ಲವೆಂದೂ ತನ್ನ ಕಥೆ ಹೇಳಿದ. ತನಗೇನೂ ದುಡ್ಡು ಬೇಡ, ತನ್ನ ಮಗನಿಗೆ ಊಟಕ್ಕೆ ದುಡ್ಡು ಕೊಟ್ಟುಬಿಡಿ ಎಂದು ತನ್ನ ಮಗನನ್ನು ತೋರಿಸಿದ. ಅವನ ಹೆಂಡತಿಯೂ ಜೊತೆಯಲ್ಲಿದ್ದಳು. ಆಕೆಯೂ ದೀನವಾದ ಮುಖದಿಂದ ಬೇಡಿದಳು. ಆದರೆ ಹಿಂದಿನ ಅನುಭವದಿಂದಲೋ ಏನೋ, ಕೊಡುವುದಿಲ್ಲವೆಂದು ಹೇಳಿ ಕಳುಹಿಸಿಬಿಟ್ಟೆ. ಅವನು ಹೋದ ಮೇಲೆ ಏನೇನೋ ಯೋಚನೆಗಳು ಬಂದವು. ಅವನು ನಿಜವಾಗಿಯೂ ದುಡ್ಡು ಕಳೆದುಕೊಂಡವನಾಗಿದ್ದರೆ...? ಯಾರೋ ಸುಳ್ಳು ಹೇಳಿ ಭಿಕ್ಷೆ ಎತ್ತಿದ್ದರಿಂದಾಗಿ ನಿಜವಾಗಿ ಕಷ್ಟದಲ್ಲಿರುವವರೂ ಏನನ್ನೂ ಪಡೆಯಲಾಗುವುದಿಲ್ಲವಲ್ಲ ಎನಿಸಿತು.
ಮರುದಿನ ಆಫೀಸಿನಿಂದ ಮನೆಗೆ ಬರುವಾಗ ಸಂಜೆ ಮನೆಯ ಬಳಿ ಪಾನೀಪುರಿ ತಿನ್ನುತ್ತಾ ನಿಂತಿದ್ದೆ. ಹಿಂದಿನ ದಿನ ಕಂಡಿದ್ದ ಅದೇ ವ್ಯಕ್ತಿ ಅಲ್ಲಿಗೆ ಬರಬೇಕೆ? ಅವನ ಹೆಂಡತಿಯೂ ಮಗನೂ ಜೊತೆಗಿದ್ದರು. "ಕ್ಯಾ ಆಪ್ಕೋ ಹಿಂದೀ ಮಾಲೂಮ್ ಹೈ?" ಎಂದಾಗ "ನಿನ್ನೆ ಡೈರಿ ಸರ್ಕಲ್ ನಲ್ಲಿ ಸಿಕ್ಕಿದ್ಯಲ್ಲಾ" ಎಂದೆ. ಕನ್ನಡದಲ್ಲಿ ನಾನು ಹೇಳಿದ್ದು ಅವನಿಗೆ ತಿಳಿಯಿತೋ ಬಿಟ್ಟಿತೋ, ಆದರೆ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದ. ಅಲ್ಲಿ ಪಾನೀಪುರಿ ತಿನ್ನಲು ಬಂದವರೆಲ್ಲಾ ನನ್ನನ್ನೇ ನೋಡಲಾರಂಭಿಸಿದರು. ಅವರಲ್ಲೊಬ್ಬ "ಅವನು ನಿಮಗೆ ಹಿಂದಿ ಬರುತ್ತಾ ಎಂದು ಕೇಳಿದ" ಎಂದ. ಆಗ ಆ ವ್ಯಕ್ತಿಯ ಪುರಾಣವನ್ನು ಅಲ್ಲಿದ್ದವರಿಗೆ ತಿಳಿಸಿದೆ. "ಹೀಗೆ ಭಿಕ್ಷೆ ಕೇಳುವವರು ಬಹಳ ಜನರಿದ್ದಾರೆ" ಎಂದು ಕೆಲವರು ಗೊಣಗಿಕೊಂಡರು.
***
ಬೆಂಗಳೂರಿನಲ್ಲಿ ಗೆಳೆಯರು, ಸಂಬಂಧಿಗಳು ಬೇಕೆಂದರೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಇವರು ಮತ್ತೆ ಮತ್ತೆ ನನಗೇ ಸಿಗುತ್ತಾರೆ ಎಂದರೆ ಅದೇನು ವಿಧಿವಿಲಾಸವೋ ಕಾಕತಾಳೀಯವೋ?
ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂದೇ ತಿಳಿಯುವುದಿಲ್ಲ. ಆರು ಹಿತವರೋ ಎನಗೆ...