ಸೋಮವಾರ, ಅಕ್ಟೋಬರ್ 8, 2007

ದೋಣಿ ಸಾಗಲಿ, ಮುಂದೆ ಹೋಗಲಿ...

ಹರಿಹರಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದೆ... ಇದೇ ತಿಂಗಳು ೧೧ನೇ ತಾರೀಖಿನಿಂದ ಕೆಲಸಕ್ಕೆ ಸೇರಬೇಕಾಗಿರುವುದರಿಂದ ಬೆಂಗಳೂರಿಗೆ ಹೊರಡಲಿದ್ದೇನೆ. ಹೊಸ ಆಸೆ-ಆಕಾಂಕ್ಷೆಗಳೊಂದಿಗೆ ಹೊಸ ಬಾಳನ್ನು ಆರಂಭಿಸುತ್ತಿದ್ದೇನೆ. ಬಾಲ್ಯದ ಹುಡುಗಾಟಗಳು, ಗೆಳೆಯರ ಸಂಗ, ಶಾಲೆ-ಕಾಲೇಜುಗಳ ಜೀವನ ಇವೆಲ್ಲವಕ್ಕೂ ಸಾಕ್ಷಿಯಾದ ಈ ಊರು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಇದೇನಪ್ಪಾ, ಕೆಲಸಕ್ಕೆ ಸೇರುವವನಿಗೆ ಇಷ್ಟೊಂದು ಫೀಲಿಂಗಾ ಅನ್ಬೇಡಿ. ಇದಕ್ಕೆ ಕಾರಣವಿದೆ. ನಾನು ಬೆಂಗಳೂರಿಗೆ ಹೋಗುತ್ತಿರುವುದಷ್ಟೇ ಅಲ್ಲದೆ ನಮ್ಮ ಕುಟುಂಬವೂ ನಮ್ಮೂರಾದ ಮಂಚಾಲೆಯಲ್ಲಿ ನೆಲೆಸಲಿದೆ. ಹಾಗಾಗಿ ನಾನು ಮತ್ತೆ ಹರಿಹರಕ್ಕೆ ಎಂದು ಬರುತ್ತೇನೆ ಎಂಬುದು ಅನಿಶ್ಚಿತ. ಆದರೆ ಒಂದಂತೂ ಸತ್ಯ. ಅಸಂಖ್ಯ ಮಧುರ ನೆನಪುಗಳನ್ನು ನೀಡಿದ ಹರಿಹರ ಸದಾ ನನ್ನ ನೆನಪಿನಂಗಳದಲ್ಲಿ ಅಚ್ಚಳಿಯದೆ ನಿಂತಿರುತ್ತದೆ...

ಉದ್ಯಾನನಗರಿಯ ಬದುಕು ಸುಂದರವಾಗಿರುತ್ತದೆಂದು ಆಶಿಸುತ್ತಾ ಬಾಳೆಂಬ ದೋಣಿ ಹೀಗೇ ಮುಂದುವರಿಯುತ್ತದೆಂದು ಬಯಸುತ್ತೇನೆ. ಕುವೆಂಪು ರಚಿಸಿರುವ ಮಿಸ್ ಲೀಲಾವತಿ ಚಿತ್ರದ ಈ ಹಾಡು ಈ ಸಮಯದಲ್ಲಿ ಪ್ರಸ್ತುತವೆಂದೆನಿಸುತ್ತಿದೆ:

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ ||ಪ||

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ||೧||

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿರೆ
ಹುಡುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿರೆ ||೨||

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ ||೩||

(ಈ ಹಾಡನ್ನು ಕನ್ನಡಆಡಿಯೋ.ಕಾಂ ನ ಈ ಪುಟದಿಂದ ಕೇಳಬಹುದು)

ಇಷ್ಟು ದಿನ ನನ್ನೊಂದಿಗೆ ಇದ್ದ ಎಲ್ಲ ಗೆಳೆಯರಿಗೆ ನನ್ನ ಸ್ನೇಹಪೂರ್ವಕ ವಂದನೆಗಳು, ಧನ್ಯವಾದಗಳು

6 ಕಾಮೆಂಟ್‌ಗಳು:

Seema S. Hegde ಹೇಳಿದರು...

ಇಂತಾ ಭಾವನೆಗಳು ಬರದು ಸಹಜ.
ಮುಂದೆ ಎಲ್ಲ ಚೊಲೋ ಆಗ್ತು ಬಿಡು.
Hope for the best.
Our wishes are with you. :)

Satish ಹೇಳಿದರು...

ನಿಮ್ ಜೊತೆ ನಿಮ್ ದೋಣೀನೂ ತಗೊಂಡ್ ಹೋಗ್ರೀ, ಈ ಹೊಳೇ ಅಲ್ದಿದ್ರೆ ಇನ್ನೊಂದ್ ಹೊಳೇನಲ್ಲಿ ತೇಲಿಸೋಕ್ ಆಗುತ್ತೆ...ಹೊಸ ಕೆಲಸದಾರಂಭಕೆ ಶುಭಾಶಯಗಳು.

jomon varghese ಹೇಳಿದರು...

ಹರೀಶ್ ಅವರೆ, ನಿಮ್ಮ ದೋಣಿ ಯಾಕೆ ನೀರ ಮಧ್ಯದಲ್ಲೇ ನಿಂತಿದೆ.. ದಡಕ್ಕೆ ಬನ್ನಿ.. ಹೊಸ ಪೋಸ್ಟ್ ಯಾವಾಗ ಹಾಕ್ತೀರಾ?

Harisha - ಹರೀಶ ಹೇಳಿದರು...

ಎಲ್ಲರಿಗೂ ನನ್ನ ಧನ್ಯವಾದಗಳು. ಬೆಂಗಳೂರಿಗೆ ಬಂದಾಗಿನಿಂದ ಸಮಯಾಭಾವ ಉಂಟಾಗಿದೆ. ಹಾಗಾಗಿ ಸ್ವಲ್ಪ ವಿಳಂಬವಾಗಿದೆ. ಸದ್ಯದಲ್ಲೇ ಮತ್ತೆ ದೋಣಿ ಮುಂದೆ ಸಾಗಲಿದೆ :)

parijata ಹೇಳಿದರು...

ನಿಮ್ಮ ಬ್ಲಾಗಿಗೆ ಇಂದೇ ಮೊದಲನೆಯ ಸಲ ಬರುತ್ತಿದ್ದೇನೆ. ಬಂದ ತತ್-ಕ್ಷಣವೇ ವಿದಾಯದ ಬರೆಹವೇ ಕಾಣಬೇಕೆ?

ನನ್ನ ಸೋದರತ್ತೆಯ ಊರು ಹರಿಹರ. ನಾವು ಚಿಕ್ಕವರಾಇದ್ದಾಗ ಅವರು ವಾಸವಾಗಿದ್ದುದು ದೇವಸ್ಥಾನದ ಹತ್ತಿರದ ಒಂದು ಬೀದಿಯಲ್ಲಿ. ಸುಂದರವಾದ ಊರು, ಸುಂದರವಾದ ದೇವಸ್ಥಾನ.

Good luck.

Harisha - ಹರೀಶ ಹೇಳಿದರು...

parijata ಅವರೆ, ಇದೇನೂ ಶಾಶ್ವತ ವಿದಾಯವಲ್ಲ.. ಸದ್ಯದಲ್ಲೇ ಮತ್ತೆ ಬರಹ ಆರಂಭಿಸುತ್ತೇವೆ. ಇಲ್ಲಿಗೆ ಬರುತ್ತಿರಿ, ಬರೆಯುತ್ತಿರಿ...